ವಯನಾಡು; ದೇವರ ನಾಡಿನಲ್ಲಿ ಕಳೆದ ಜುಲೈ 30ರಂದು ನಡೆದ ಮಳೆ ಮತ್ತು ಭೀಕರ ಭೂಕುಸಿತದಲ್ಲಿ ಹಲವಾರು ಜನರು ನಾಪತ್ತೆಯಾಗಿದ್ದು, ಇದೀಗ ನಾಪತ್ತೆಯಾದವರನ್ನ ಕೇರಳ ಸರ್ಕಾರ ಮೃತರು ಎಂದು ಘೋಷಿಸಲು ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಇದು ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಕಾರ್ಯ ಚುರುಕುಗೊಳಿಸಲು ಅನುಕೂಲವಾಗಲಿದ್ದು, ನಾಪತ್ತೆಯಾದವರ ಪಟ್ಟಿ ಮಾಡಿ ಪರಿಶೀಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳನ್ನೂ ಒಳಗೊಂಡಂತೆ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯಲ್ಲಿ ಪಂಚಾಯ್ತಿ ಕಾರ್ಯದರ್ಶಿ, ಗ್ರಾಮಾಧಿಕಾರಿ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳು ಇರಲಿದ್ದಾರೆ ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ.
ಈ ಸಮಿತಿಯು ನಾಪತ್ತೆಯಾದವರ ಹೆಸರಿನ ಪಟ್ಟಿ ಮಾಡಿ, ಅದನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಪರಿಶೀಲನೆಗಾಗಿ ಕಳುಹಿಸಲಿದ್ದಾರೆ. ನಂತರದಲ್ಲಿ ಈ ಪಟ್ಟಿಯು ರಾಜ್ಯ ಮಟ್ಟದ ಸಮಿತಿಗೆ ಸಲ್ಲಿಕೆಯಾಗಲಿದ್ದು, ರಾಜ್ಯ ಸಮಿತಿಯಲ್ಲಿ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಹಾಗೂ ಸ್ಥಳೀಯ ಆಡಳಿತದ ಪ್ರಧಾನ ಕಾರ್ಯದರ್ಶಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
ನಾಪತ್ತೆಯಾದ ವ್ಯಕ್ತಿಗಳನ್ನು ಮೃತರು ಎಂದು ಸರ್ಕಾರ ಘೋಷಿಸಿ, ಅವರ ಕುಟುಂಬಗಳಿಗೆ ಪರಿಹಾರ ವಿತರಿಸಲಿದೆ.
ಸದ್ಯದ ಅಧಿಕೃತ ಮಾಹಿತಿ ಪ್ರಕಾರ ದುರಂತದಲ್ಲಿ 263 ಜನ ಮೃತಪಟ್ಟು, 35 ಮಂದಿ ನಾಪತ್ತೆಯಾಗಿದ್ದರು. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಸಲ್ಲಿಕೆಯಾದ ನಾಪತ್ತೆ ದೂರನ್ನು ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.