ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ಸತ್ಯಜಿತ್ (72) ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸತ್ಯಜೀತ್ ಅವರಿಗೆ ಕೆಲ ದಿನಗಳ ಹಿಂದೆ ಅವರಿಗೆ ಜಾಂಡೀಸ್ ಆಗಿತ್ತು ಅದರ ಬೆನ್ನಲ್ಲೇ ಕಳೆದ ಶುಕ್ರವಾರ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಗ್ಯಾಂಗ್ರಿನ್ ನಿಂದ ಎಡಗಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಾಲಿನಲ್ಲಿ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಿಂದ ಅವರಿಗೆ ಬೇಡಿಕೆ ಕಡಿಮೆ ಆಯಿತು.
ಸೈಯ್ಯದ್ ನಿಜಾಮುದ್ದೀನ್ ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಕೆಎಸ್ಆರ್ಟಿಸಿಯಲ್ಲಿ ಚಾಲಕನಾಗಿದ್ದ ಇವರಿಗೆ ಮೊದಲು ನಾನ ಪಾಟೇಕರ್ ಜತೆ ಅಂಕುಶ್ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಕನ್ನಡದಲ್ಲಿ ಸುಮಾರು 600 ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ವಿಲನ್ ಮತ್ತು ಪೋಷಕ ಪಾತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಜನರನ್ನು ನಗಿಸಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರ ಸಿನಿಮಾಗಳಲ್ಲಿ ಸತ್ಯಜಿತ್ ಖಳನಟ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್ ಹಾಫ್’ ಚಿತ್ರದಲ್ಲಿ ವೀಲ್ಚೇರ್ನಲ್ಲಿ ಕುಳಿತುಕೊಂಡೇ ಅವರು ನಟಿಸಿದ್ದರು. ಆ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿರಲಿಲ್ಲ.