ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟ ಮುಂದುವರೆದಿರುವ ಮಧ್ಯೆ ಇದೀಗ ಮತ್ತೊಂದು ಹೇಳಿಕೆ ಕಾರಣಕ್ಕೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಂಗನಾ ರಣಾವತ್, ಬಾಲಿವುಡ್ ಚಿತ್ರರಂಗದಲ್ಲಿರುವ ಸ್ವಜನಪಕ್ಷಪಾತದ ಕುರಿತು ವಿವರವಾಗಿ ಬಿಡಿಸಿಟ್ಟಿದ್ದರು.

ಸುಶಾಂತ್ ಸಿಂಗ್ ಅವರದ್ದು ಕೊಲೆ ಎಂದು ಕಂಗನಾ ಹೇಳಿದ್ದರು. ಸುಶಾಂತ್ ಅವರ ಸಾವಿಗೆ ಬಾಲಿವುಡ್‌ನ ‘ಮೂವಿ ಮಾಫಿಯಾ’ ಕಾರಣ, ಹಾಗೂ ಕೆಲವು ಮಾಧ್ಯಮಗಳು ಕಾರಣ ಎಂದು ಕಂಗನಾ ರಣಾವತ್ ಆರೋಪಿಸಿದ್ದರು.
ಆದರೆ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೆಲ ಬಾಲಿವುಡ್ ಮಂದಿ, ತಮ್ಮ ವಿರೋಧಿಗಳನ್ನು ಹಣಿಯಲೆಂದೇ ಕಂಗನಾ ರಣಾವತ್ ವೃಥಾ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಖಾರವಾಗಿಯೇ ತಿರುಗೇಟು ನೀಡಿರುವ ಕಂಗನಾ ರಣಾವತ್, ನಾನು ಮಾಡಿರುವ ಆರೋಪಗಳು ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.