Saturday, May 4, 2024
Homeತಾಜಾ ಸುದ್ದಿಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಘೋಷಣೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್..!; ಜೆಡಿಎಸ್‌ ನಾಯಕರ ಜತೆಗೆ ಸಮಾಲೋಚನೆ ನಡೆಸಿಲ್ಲ;...

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಘೋಷಣೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ ಜೆಡಿಎಸ್..!; ಜೆಡಿಎಸ್‌ ನಾಯಕರ ಜತೆಗೆ ಸಮಾಲೋಚನೆ ನಡೆಸಿಲ್ಲ; ಕುಮಾರಸ್ವಾಮಿ ಅಸಮಾಧಾನ

spot_img
- Advertisement -
- Advertisement -

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿರುವ ಬಿಜೆಪಿ ಧೋರಣೆಗೆ ಜೆಡಿಎಸ್‌ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ. 

ಜೆಡಿಎಸ್‌ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಅಕ್ಟೋಬರ್‌ನಲ್ಲೇ ಸೇರಿದ್ದು, ಆರು ತಿಂಗಳು ಕಳೆದರೂ ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಆದರೆ ಕಮಲ ಪಾಳಯವು ಸೀಟು ಹಂಚಿಕೆ ಅಂತಿಮಗೊಳ್ಳುವ ಮುನ್ನವೇ ಲೋಕಸಭಾ ಚುನಾವಣೆಯ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಯ್ಕೆಗೊಳಿಸುವ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಜೆಡಿಎಸ್‌ ನಾಯಕರ ಜತೆಗೆ ಸಮಾಲೋಚನೆ ನಡೆಸಿಲ್ಲ ಎಂಬುದು ದಳ ನಾಯಕರ ತಕರಾರು ಎಂದು ತಿಳಿದು ಬಂದಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ, ಕುಮಾರಸ್ವಾಮಿ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಬಿಜೆಪಿ ವರಿಷ್ಠರು ಈ ಹಿಂದೆ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಹಮತ ವ್ಯಕ್ತಪಡಿಸಿದ್ದರು. ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಅಭ್ಯರ್ಥಿ ಹಾಗೂ ಚಿಹ್ನೆ ವಿನಿಮಯಕ್ಕೆ ಕುಮಾರಸ್ವಾಮಿ ಅವರು ಶಾ ಅವರ ಮುಂದೆ ಪ್ರಸ್ತಾವ ಮುಂದಿಟ್ಟಿದ್ದರು. ಈ ಸೂತ್ರದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಶಾ ಭರವಸೆ ನೀಡಿದ್ದರು. ಆದರೆ, ಇದೀಗ ಬೆಂಗಳೂರು ಗ್ರಾಮಾಂತರಕ್ಕೆ ದೇವೇಗೌಡರ ಕುಟುಂಬದ ಡಾ.ಸಿ.ಎನ್‌.ಮಂಜುನಾಥ್ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ತುಮಕೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ಹೆಸರನ್ನೇ ಘೋಷಿಸಲಾಗಿದೆ. ಅದನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿಲ್ಲ. ಇದರ ಬಗ್ಗೆ ಜೆಡಿಎಸ್‌ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಇನ್ನು ಜೆಡಿಎಸ್‌ನಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆದಿವೆ. ನಿಖಿಲ್‌ ಬದಲು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಪರಿಶೀಲನೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಶಾ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಮಂಡ್ಯದಿಂದ ಸ್ಪರ್ಧಿಸಲು ಕುಮಾರಸ್ವಾಮಿ ಒಪ್ಪಲಿಲ್ಲ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!