ಶ್ರೀನಗರ: ದೇಶದಲ್ಲಿ ಕೊರೋನಾ ವೈರಸ್ ತಲೆನೋವು ಒಂದೆಡೆಯಾದರೆ, ಗಡಿಯಲ್ಲಿ ಉಗ್ರರ ಕಾಟ ಮತ್ತೊಂದೆಡೆಯಾಗಿದೆ. ಕೊರೋನಾ ಭಿತಿ ನಡುವಲ್ಲೇ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೆಲಾಹುಲಾ ಎಂಬ ಪ್ರದೇಶದಲ್ಲಿ ಸೇನಾಪಡೆ ಕಾರ್ಯಾಚರಣೆ ನಡೆಸಿದ್ದು, ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.
ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇನಾಪಡೆಗಳು ಕಾರ್ಯಾಚರಣೆಗಿಳಿದಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಚುರುಕುಗೊಂಡ ಸೇನಾಪಡೆಗಳು ಕಾರ್ಯಾಚರಣೆಯನ್ನು ಎನ್ಕೌಂಟರ್’ಗೆ ಮಾರ್ಪಡಿಸಿ ಮೊದಲಿಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಬಳಿಕ ಮತ್ತಷ್ಟು ಉಗ್ರರು ಅಡಗಿಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿ ಮತ್ತಿಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದ್ದು, ಹತ್ಯೆಯಾದ ಉಗ್ರರ ಕುರಿತು ಸೇನಾಪಡೆಗಳು ಮಾಹಿತಿ ಕಲೆ ಹಾಕುತ್ತಿವೆ ಎಂದು ವರದಿಗಳು ತಿಳಿಸಿವೆ.