ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿತ ಸಂಭವಿಸಿ ಒಂದು ತಿಂಗಳಾಗುತ್ತಾ ಬಂತು. ದುರಂತಕ್ಕೆ 11 ಜನ ಬಲಿಯಾಗಿದ್ದಾರೆ.ದುರಂತದಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾರೆ,ಅವರು ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮುಳುಗುತಜ್ಞ ಈಶ್ವರ್ ಮಲ್ಪೆ ಅವರಿಗೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಇದೀಗ ಶಾಸಕ ಸತೀಶ್ ಸೈಲ್ ಅವರು ಅನುಮತಿ ನೀಡಿದ ಹಿನ್ನೆಲೆ ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಶೋಧ ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಪತ್ತೆ ಹಚ್ಚಿದ್ದಾರೆ.
ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆಯ ವೇಳೆ ಲಾರಿಯ ಜಾಕ್ ಪತ್ತೆಯಾಗಿದೆ.ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಎಂದು ಮಾಲೀಕ ಮುಫಿನ್ ಖಚಿತಪಡಿಸಿದ್ದಾರೆ.ನದಿಯಲ್ಲಿ ಲಾರಿಯ ಬಾಗಿಲಿನ ಕೀಲು ಹಾಗೂ ಜಾಕ್ ಪತ್ತೆಯಾಗಿವೆ. ಲಾರಿಯ ಬಾಗಿಲದ ಕೀಲು ನನ್ನ ವಾಹನದಲ್ಲ. ಆದರೆ ಜಾಕ್ ನನ್ನ ವಾಹನದ್ದು ಎಂದು ನಾಪತ್ತೆ ಆದ ಬೆಂಜ್ ಲಾರಿಯ ಮಾಲೀಕ ಮುಫಿನ್ ಹೇಳಿಕೆ ನೀಡಿದ್ದಾರೆ. ಲಾರಿ ಕೊಚ್ಚಿ ಹೋದ 29 ದಿನಗಳ ಬಳಿಕ ಬಿಡಿ ಭಾಗ ಪತ್ತೆಯಾಗಿದ್ದು, ಇದೀಗ ಮೂವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಇಂದು ಎರಡು ಗಂಟೆಗಳ ಕಾಲ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸಿದ್ದಾರೆ. ನಾಳೆ ಬೆಳಗ್ಗೆ 8-30 ರಿಂದ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ ಎನ್ನಲಾಗಿದೆ.