ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಈಗ ಜಪಾನ್‌ಗಿಂತ ಮುಂದಿದ್ದು, 1,08,494 ಗಿಗಾವ್ಯಾಟ್/ಗಂಟೆ ವಿದ್ಯುತ್ ಉತ್ಪಾದಿಸುತ್ತಿದೆ.
ನವದೆಹಲಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಲ್ಹಾದ ಜೋಶಿ, ಜಪಾನ್ ಸದ್ಯ 96,459 ಗಿಗಾವ್ಯಾಟ್/ಗಂಟೆ ವಿದ್ಯುತ್ ಉತ್ಪಾದಿಸುತ್ತಿದ್ದರೆ ಭಾರತ 1,08,494 ಗಿಗಾವ್ಯಾಟ್/ಗಂಟೆ ವಿದ್ಯುತ್ ಉತ್ಪಾದಿಸಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ
ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವೀಗ ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಮೂರನೇ ಅತಿದೊಡ್ಡ ದೇಶವಾಗಿ ಹೊರ ಹೊಮ್ಮಿದೆ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ರಾರಾಜಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ 2024ರ ದತ್ತಾಂಶದ ಪ್ರಕಾರ ಚೀನಾ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
ಜೂನ್ 30ರ ಹೊತ್ತಿಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯ 484.8 ಗಿಗಾವ್ಯಾಟ್ ಆಗಿದ್ದು, ಇದರಲ್ಲಿ 242.04 ಗಿಗಾವ್ಯಾಟ್ ಉಷ್ಣ-ಕಲ್ಲಿದ್ದಲಿನಿಂದ ಹಾಗೂ 8.78 ಗಿಗಾವ್ಯಾಟ್ ಪರಮಾಣುವಿನಿಂದ ಮತ್ತು 234.00 ಗಿಗಾವ್ಯಾಟ್ ನವೀಕರಿಸಬಹುದಾದ ಮೂಲಗಳಿಂದ ಸಾಧ್ಯವಾಗಿದೆ.


