ಮಂಗಳೂರು : ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿಯ ಇಬ್ಬರನ್ನು ಮಂಗಳೂರು ನಗರ ಸೆನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಏರ್‌ಟೆಲ್ ಕಂಪೆನಿಯ 86 ಸಿಮ್‌ಕಾರ್ಡಗಳು, 2 ಮೊಬೈಲ್ ಪೋನ್‌ಗಳು, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ನಗರದ ಸಂಜಯನಗರ ನಿವಾಸಿ ಶಮದ್ ಮಹಮ್ಮದ್ ಸಮರ್ (26) ಮತ್ತು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಆದರ್ಶನಗರ ನಿವಾಸಿ ಮಹಮ್ಮದ್ ಅಜೀಂ (19) ಬಂಧಿಸಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಮದ್ ಮಂಗಳೂರು ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ಬಾಡಿಗೆ ಮನೆಯಲ್ಲಿದ್ದ. ಮಹಮ್ಮದ್ ಅಜೀಂ ಕೂಡ ಮಂಗಳೂರು ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದ. ಇವರು ಬೆಳ್ತಂಗಡಿ ನಗರದ ಸಂಜಯ ನಗರದ ಮುಸ್ತಾಫ ಮತ್ತು ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಸಾಜೀದ್‌ನ ಸೂಚನೆಯಂತೆ ತಮ್ಮ ಗೆಳೆಯರು, ಪರಿಚಿತರಿಗೆ, ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್ ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು.
ಆರೋಪಿಗಳು ಕಳೆದ ಜನವರಿ ಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400 ರಿಂದ 500 ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನ್ನ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಬೆಳ್ತಂಗಡಿ ನಗರದ ಸಂಜಯ ನಗರದ ನಿವಾಸಿ ಮುಸ್ತಾಫ ಮತ್ತು ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ನಿವಾಸಿ ಸಾಜೀದ್‌ಗೆ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದುಬೈ ಹಾಗೂ ಇತರ ಕೆಲವು ದೇಶಗಳಲ್ಲಿರುವ ಸೈಬರ್ ವಂಚಕರು ಭಾರತದ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಭಾರತೀಯರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಾರೆ. ಭಾರತೀಯ ಸಿಮ್‌ಗಳಾದರೆ ಆ ಸಂಖ್ಯೆಯನ್ನು ಬಳಸಿ ಭಾರತೀಯರನ್ನು ನಂಬಿಸಿ ವಂಚಿಸುವುದು ಸುಲಭ ಎಂಬುದು ವಂಚಕರ ಲೆಕ್ಕಾಚಾರ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಐವರನ್ನು ಬಂಧಿಸಿ ಅವರಿಂದ 42 ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದರು. ಈಗ ಮಂಗಳೂರು ನಗರ ಪೊಲೀಸರು ಬಂಧಿಸಿರುವ ಆರೋಪಿಗಳಿಗೂ ಧರ್ಮಸ್ಥಳದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗಳಿಗೂ ಸಂಪರ್ಕವಿರುವ ಅನುಮಾನ ಇರುವ ಶಂಕೆ ಇದ್ದು. ಈ ಬಗ್ಗೆ ಪೊಲೀಸರು ಧರ್ಮಸ್ಥಳ ಪೊಲೀಸರನ್ನು ಸಂಪರ್ಕಿಸಿ ತನಿಖೆ ನಡೆಸುತ್ತಿದ್ದಾರೆ.