ಸುಳ್ಯ; ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬಲ್ಲಿ ನಡೆದಿದೆ.
ಮೇ 9ರಂದು ಸಂಜೆ ಸುಳ್ಯ ತಾಲೂಕಿನ ಮುಪ್ಪೇರಿಯಾ ಗ್ರಾಮದ ಪಜಂಬಿಲ ಎಂಬ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಬಾಳುಕತ್ತಿ ಕಟ್ಟಿ, ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬೆಳ್ಳಾರೆ ಪೊಲೀಸ್ ಉಪ ನಿರೀಕ್ಷಕರಾದ ಈರಯ್ಯ ಡಿ.ಎನ್. ಅವರ ನೇತೃತ್ವದ ತಂಡ ಸಂಜೆ ಸುಮಾರು 6:33ಕ್ಕೆ ಸ್ಥಳಕ್ಕೆ ಅನಿರೀಕ್ಷಿತ ದಾಳಿ ನಡೆಸಿತು. ಪೊಲೀಸರನ್ನು ಕಂಡ ಕೂಡಲೇ ಅಂಕದಲ್ಲಿದ್ದ 10 ರಿಂದ 15 ಮಂದಿ ಪರಾರಿಯಾಗಿದ್ದು, ಮೂವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಬಂಧಿತರನ್ನು ಮುರುಳ್ಯ ಗ್ರಾಮದ ಜಯಪ್ರಕಾಶ (38), ಮುಪ್ಪೇರಿಯಾ ಗ್ರಾಮದ ಸುದರ್ಶನ ಎಂ. (42) ಮತ್ತು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಜಯಪ್ರಕಾಶ (42) ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಕಿಶೋರ್ ಹಾಗೂ ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


