ಮಂಗಳೂರು: ಇಲ್ಲಿನ ಸೇರಾವೋ ರಸ್ತೆ ಕಂಪೌಂಡ್‌ನಲ್ಲಿ ಪತಿಯೇ ಪತ್ನಿ ಮತ್ತು ಪುತ್ರನಿಗೆ ಚೂರಿಯಿಂದ ಹಲ್ಲೆ ನಡೆಸಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಯನ್ನು ರಮೇಶ್ ಬಂಗೇರ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಪತ್ನಿ ಬೇಬಿ ಕುಂದರ್ ಮತ್ತು ಮಗ ಅಶ್ವಿನ್ ಕುಮಾರ್ ಗೆ ಗಾಯ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಸೆ.11ರಂದು ರಾತ್ರಿ 10:30ಕ್ಕೆ ಗಂಡ ರಮೇಶ್ ಬಂಗೇರಾ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಈ ಜಾಗ ನನ್ನದು, ನೀವಿಬ್ಬರೂ ಇಲ್ಲಿಂದ ಹೋಗಿ ಎಂದು ಹೇಳಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭ ಬೇಬಿ ಕುಂದರ್ ಅವರ ಎಡಕೈ ಮಣಿಗಂಟಿಗೆ ಗಾಯವಾಗಿದೆ. ಇದನ್ನು ನೋಡಿ ಮಗ ಅಶ್ವಿನ್ ತಡೆಯಲು ಬಂದಾಗ ಅಶ್ವಿನ್ ಬಲ ಕೈಗೂ ಗಾಯವಾಗಿದೆ. ಗಾಯಗೊಂಡ ಬೇಬಿ ಸಹಾಯಕ್ಕಾಗಿ ಕೂಗಿದಾಗ, ನೆರೆಹೊರೆಯವರು ಅವರ ಸಹಾಯಕ್ಕೆ ಅಲ್ಲಿಗೆ ಬಂದಿದ್ದಾರೆ .
ಇನ್ನು ರಮೇಶ್ ತನ್ನ ಪತ್ನಿ ಮತ್ತು ಮಗನಿಗೆ ಮನೆಯಿಂದ ಕೂಡಲೇ ಹೊರಹೋಗುವಂತೆ ಹೇಳಿದ್ದು, ಅವರು ಹೊರ ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂಬಂಧಪಟ್ಟವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.


