ಮಂಗಳೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 19,500 ದಂಡ ವಿಧಿಸುವಂತೆ ಮಂಗಳೂರಿನ 3ನೇ ಸಿಜೆಎಂ (ಕಿರಿಯ ವಿಭಾಗ) ನ್ಯಾಯಾಲಯ ಆದೇಶಿಸಿದೆ.
ಇಲ್ಲಿನ ಶಕ್ತಿನಗರದ ನಿವಾಸಿಯಾಗಿರುವ ರಿಕ್ಷಾ ಚಾಲಕ ಶಿವಕುಮಾರ್ (45) ಶಿಕ್ಷೆಗೊಳಗಾದ ಆರೋಪಿ. ಆರೋಪಿ ಶಿವಕುಮಾರ್ 2019ರ ಫೆಬ್ರುವರಿ 20ರಂದು ರಾತ್ರಿ ತನ್ನ ಪತ್ನಿ ಸಾಕಮ್ಮ (39) ಮತ್ತು ಪುತ್ರಿಗೆ ಹೀನಾಯವಾಗಿ ನಿಂದಿಸಿದ್ದ. ಈ ವೇಳೆಯಲ್ಲಿ ಸಾಕಮ್ಮ ಮನೆಯಿಂದ ಹೊರಗೆ ಬಂದಾಗ ಶಿವಕುಮಾರ್ ಆಕೆಯ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಳಿನಿಂದ ತೀವ್ರವಾಗಿ ಹೊಡೆದಿದ್ದ ಎಂದು ಆರೋಪಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದರು. ಈ ಪ್ರಕರಣವು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಶನಿವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಧುಕರ ಭಾಗವತ್, ಆರೋಪಿಗೆ ಶಿಕ್ಷೆವಿಧಿಸಿದ್ದಾರೆ. ದಂಡ ಮೊತ್ತದಲ್ಲಿ ₹ 19ಸಾವಿರ ಮೊತ್ತವನ್ನು ಸಂತ್ರಸ್ತೆ ಸಾಕಮ್ಮ ಅವರಿಗೆ ಹಾಗೂ ₹ 500 ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ ವಾದ ಮಂಡಿಸಿದ್ದರು.