ಬೆಳ್ತಂಗಡಿ: ಜಾಂಡೀಸ್ ಹಾಗೂ ವಿಪರೀತ ರಕ್ತದೊತ್ತಡದಿಂದ ಬಳಲುತ್ತಿದ್ದ ಬಿಜೆಪಿ ಮುಖಂಡ ರಾಮ್ ಪ್ರಸಾದ್ ಮರೋಡಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಮರೋಡಿ ಗ್ರಾಮದ ಪಲಾರಗೋಳಿ ನಿವಾಸಿಯಾಗಿರುವ ರಾಮ್ ಪ್ರಸಾದ್ ಅವರು ವಿಪರೀತ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇತ್ತೀಚಿಗೆ ಜಾಂಡೀಸ್ ರೋಗಕ್ಕೆ ತುತ್ತಾಗಿ ಹೆಚ್ಚಿನ ಚಿಕಿತ್ಸೆಗೆಂದು ಮೂರು ದಿನಗಳ ಹಿಂದಷ್ಟೇ ಮಂಗಳೂರಿನ ಕೆಎಂಸಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರ ಮೆದುಳು ಹಾಗೂ ಲಿವರ್ ಕೂಡ ಕೈಕೊಟ್ಟಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಇಹ ಲೋಕ ತ್ಯಜಿಸಿದ್ದಾರೆ.

ಬಜರಂಗದಳ ವೇಣೂರು ಪ್ರಖಂಡದ ಸಂಚಾಲಕರಾಗಿದ್ದ ಅವರು ಹಿಂದೂ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬುತ್ತಿದ್ದರು. ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸಿಕೊಟ್ಟಿದ್ದಾರೆ. ಕಳೆದ ವರ್ಷ ನಡೆದ ಪಲಾರಗೋಳಿ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.