ಬೆಳ್ತಂಗಡಿ: ಸಮಾಜವನ್ನು ಕೋವಿಡ್19 ವೈರಸ್ ಸೋಂಕಿನಿಂದ ಪಾರು ಮಾಡಲು ಪಣತೊಟ್ಟು ನಿಂತಿರುವ ಮತ್ತು ಕೊರೊನಾ ಸೋಂಕು ಸಮಾಜದಲ್ಲಿ ಹರಡದಂತೆ ಪ್ರತಿನಿತ್ಯ ಕ್ವಾರಾಂಟೈನ್ ರೋಗಿಗಳನ್ನು ಗಮನಿಸುವ ಕೆಲಸದಲ್ಲಿ, ಜನರಿಗೆ ಮಾಹಿತಿಯನ್ನು ತಲುಪಿಸುವ ನಿಟ್ಟಿನಲ್ಲಿ ದಿನ ಪ್ರತಿದಿನ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಆರೋಗ್ಯ ಇಲಾಖೆಯ “ಡಿ” ವರ್ಗದ ಕಾರ್ಯಕರ್ತೆಯರಿಗೆ ದೈನಂದಿನ ಉಪಯೋಗಕ್ಕೆ ಸಂಬಂಧಿಸಿದಂತೆ ಆಹಾರ ಹಾಗೂ ಇನ್ನಿತರ ವಸ್ತುಗಳ ಕಿಟ್ ನೀಡಿ ವಂದನೆ ಸಲ್ಲಿಸಲಾಯಿತು.
“ಅವರು ನಮ್ಮನ್ನು ರಕ್ಷಿಸುತ್ತಿದ್ದಾರೆ, ಅವರುಗಳ ಕುಟುಂಬವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದು ಮತ್ತು ನಮ್ಮ ಸಮಾಜದ್ದು” ಎಂಬ ಧ್ಯೇಯದಿಂದ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನಡೆದ ಈ ಕಾರ್ಯದಲ್ಲಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ “ಡಿ” ವರ್ಗದ ಕಾರ್ಯಕರ್ತೆಯರು ಆಗಮಿಸಿ ಕಿಟ್ ಸ್ವೀಕರಿಸಿದರು.
ತಾಲೂಕಿನ ಒಟ್ಟು 247 ಕಾರ್ಯಕರ್ತೆಯರು, 15 ಡಿ ದರ್ಜೆ ನೌಕರರಿಗೆ ಒಟ್ಟು 262 ಮಂದಿಗೆ 10 ಕೆ.ಜಿ. ಅಕ್ಕಿ ಸಹಿತ ಅಗತ್ಯ ದಿನಬಳಕೆ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಜಯ್, ಆಶಾ ಮೇಲ್ವಿಚಾರಕಿ ಹರಿಣ , ಹಿರಿಯ ಆರೋಗ್ಯ ಸಹಾಯಕಿ ಲೀಲಾವತಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.