Sunday, June 16, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಬದುಕು ಕಟ್ಟೋಣ ಬನ್ನಿ ತಂಡದಿಂದ ಹಳೆಪೇಟೆ ಶಾಲೆ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ

ಬೆಳ್ತಂಗಡಿ : ಬದುಕು ಕಟ್ಟೋಣ ಬನ್ನಿ ತಂಡದಿಂದ ಹಳೆಪೇಟೆ ಶಾಲೆ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ : ದ.ಕ ಜಿಲ್ಲೆಯಲ್ಲಿ ಶ್ರಮದಾನ ಮತ್ತು ಹೊರೆಕಾಣಿಕೆಗೆ ವಿಶೇಷ ಸ್ಥಾನಮಾನ ಇದ್ದು ಇದು ಇಲ್ಲಿಯ ಸಂಸ್ಕೃತಿಯ ಪ್ರತೀಕವಾಗಿದೆ ಶ್ರಮದಾನದ ಮೂಲಕ ಹಳೆಪೇಟೆ ಸರಕಾರಿ ಶಾಲೆಯನ್ನು ನವೀಕರಣಗೊಳಿಸಿ ಶಿಕ್ಷಣ ತಜ್ಞ ಡಾ. ಯಶೋವರ್ಮರ ನೆನಪಿನಲ್ಲಿ ಹಸ್ತಾಂತರಿಸಿರುವುದು ಶ್ಲಾಘನೀಯ” ಎಂದು ಬೆಂಗಳೂರು ಕ್ಷೇಮವನದ ಸಿಇಒ  ಶ್ರದ್ಧಾ ಅಮಿತ್ ಹೇಳಿದರು.

ಅವರು ಗುರುವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ,ರೋಟರಿ ಕ್ಲಬ್ ಬೆಳ್ತಂಗಡಿ, ಕ್ಯಾನ್ ಫಿನ್ ಹೋಂ ಸಂಸ್ಥೆ ಬೆಂಗಳೂರು, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಸರಕಾರಿ ಹಿಪ್ರಾ ಶಾಲೆ ಹಳೆಪೇಟೆ ಉಜಿರೆ ಇದರ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಯಶೋನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಸಮಾಜದಲ್ಲಿ ಸಜ್ಜನರಾಗಿ ಬಾಳಲು ಪ್ರಾಥಮಿಕ ಶಿಕ್ಷಣದ ತಳಹದಿ ಮುಖ್ಯ. ಸಂಸ್ಕಾರವನ್ನು ತಿಳಿಸುವಲ್ಲಿ ಪೋಷಕರು,ಶಿಕ್ಷಕರು, ಸಹಪಾಠಿಗಳು ಪ್ರಾಮುಖ್ಯರಾಗಿರುತ್ತಾರೆ.ಮಕ್ಕಳಿಗೆ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಿ ಇತರ ಭಾಷೆಗಳನ್ನು ಕಲಿಸಬೇಕು.ಸಂಸ್ಕಾರ ಉಳಿಯಲು ಕನ್ನಡ ಭಾಷೆ ಬೆಳೆಯಬೇಕು, ಇದಕ್ಕಾಗಿ ಕನ್ನಡ ಶಾಲೆಗಳಿಗೆ ಇನ್ನಷ್ಟು ಹೆಚ್ಚಿನ ಮಹತ್ವ ಸಿಗಬೇಕು”ಎಂದರು

“ಬದುಕು ಕಟ್ಟೋಣ ಬನ್ನಿ ತಂಡ ಯುವಕರಿಗೆ ಸಮಾಜ ಸೇವೆ ಮಾಡುವ ಅವಕಾಶ ಒದಗಿಸುತ್ತಿದೆ. ದಕ ಜಿಲ್ಲೆ ಶಿಕ್ಷಣ ವಿಚಾರದಲ್ಲಿ ಮುಂದಿದೆ. ಕನ್ನಡ ಶಾಲೆಯ ಮಕ್ಕಳಿಗೂ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾದ ಅಗತ್ಯವಿದೆ ಹಾಗೂ ಇದರ ಜತೆ ವಿವಿಧ ಕಲೆಗಳನ್ನು ಪರಿಚಯಿಸುವ ಕೆಲಸವಾಗಬೇಕು” ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಮಾತನಾಡಿ “ಮಕ್ಕಳ ಬಗ್ಗೆ ಹೆಚ್ಚಿನ ತುಡಿತ ಹೊಂದಿದ್ದ ಯಶೋವರ್ಮರ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಅವರ ಯೋಚನೆ ಯೋಜನೆಗಳು ವಿಶಿಷ್ಟವಾಗಿದ್ದು ಅವು ಜೀವನ ರೂಪಿಸಿಕೊಳ್ಳಲು ಉತ್ತಮ ತಳಹದಿಯಾಗಿದ್ದವು. ಸಮರ್ಥ ನಾಯಕತ್ವವಿದ್ದಲ್ಲಿ ಕೆಲಸಗಳನ್ನು ನಡೆಸುವುದು ಸುಲಭ” ಎಂದು ಹೇಳಿದರು .

ಪ್ರಾಸ್ತಾವಿಕವಾಗಿ ಮಾತನಾಡಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ “ಸಂಘಟನೆಗಳು ಕಟ್ಟುವುದು ಸುಲಭ ಆದರೆ ಅವುಗಳನ್ನು ನಿರಂತರವಾಗಿ ಕೊಂಡೊಯ್ಯಬೇಕಾದುದು ಅಗತ್ಯ. ಸಮಾಜಕ್ಕೆ ಶಕ್ತಿ ತುಂಬುವ ಕೆಲಸಗಳು ಇತರರಿಗೆ ಪ್ರೇರಣೆ ನೀಡುತ್ತವೆ. ಒಟ್ಟು 25 ಕನ್ನಡ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಿದ್ದು ಇದರಲ್ಲಿ ಮುಂಡತ್ತೋಡಿ, ಪೆರಿಯಡ್ಕ, ಹಳೆಪೇಟೆ ಶಾಲೆಗಳ ಕೆಲಸ ಪೂರ್ಣಗೊಂಡಿದ್ದು ಲಾಯಿಲ ಶಾಲೆಯ 80ಶೇ. ಕೆಲಸವಾಗಿದೆ ಇನ್ನಷ್ಟು ಅರ್ಜಿಗಳು ಬಂದಿದ್ದು ಆದ್ಯತೆ ಮೇರೆಗೆ ಇತರ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು” ಎಂದರು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಸೋನಿಯಾ ವರ್ಮ, ಪೂರನ್ ವರ್ಮ, ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್, ರೋಟರಿ ಇಂದಿರಾನಗರ ನಿಯೋಜಿತ ಅಧ್ಯಕ್ಷೆ ಸುಪ್ರಿಯಾ ಕಂದಾರಿ, ಪೂರ್ವಾಧ್ಯಕ್ಷ ಜಗದೀಶ್ ಮುಗುಳಿ, ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಕುಮಾರ್ ಹೆಗ್ಡೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಉಜಿರೆ

 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ ಉಪಸ್ಥಿತರಿದ್ದರು. ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಧನಂಜಯ ರಾವ್ ಬಿ.ಕೆ. ಸ್ವಾಗತಿಸಿದರು ತಿಮ್ಮಯ್ಯ ವಂದಿಸಿದರು.

ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಏಳು ಮಂದಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಪೆರಿಯಡ್ಕ,ಹಳೆಪೇಟೆ ಹಾಗೂ ಮುಂಡತ್ತೋಡಿ ಈ ಶಾಲೆಗಳ 250 ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಟಿಫಿನ್ ಬಾಕ್ಸ್ ವಿತರಿಸಲಾಯಿತು.20 ಮಂದಿ ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆಯಲಾಯಿತು.

12 ಕೊಠಡಿ ಹಾಗೂ ಸಭಾಭವನ ಹೊಂದಿರುವ ಹಳೆಪೇಟೆ ಶಾಲೆ ಕುಸಿಯುವ ಹಂತ ತಲುಪಿದ ಸಮಯ ಅಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಇತರ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಶಾಲೆಯನ್ನು ನವೀಕರಿಸುವ ಯೋಜನೆ ರೂಪಿಸಿ ಫೆ.4ರಂದು ಕಾಮಗಾರಿ ಆರಂಭವಾಗಿತ್ತು. ಸುಮಾರು 600 ಮಂದಿ ಶ್ರಮದಾನದಲ್ಲಿ ಭಾಗವಹಿಸಿ ಶಾಲೆಯನ್ನು ಸಂಪೂರ್ಣ ನವೀಕರಣಗೊಳಿಸಿ, ಡಾ.ಯಶೋವರ್ಮ ಇವರ ನೆನಪಿನಲ್ಲಿ ಬುಧವಾರ ಹಸ್ತಾಂತರಿಸಲಾಯಿತು

- Advertisement -
spot_img

Latest News

error: Content is protected !!