Thursday, April 25, 2024
Homeಕರಾವಳಿಮರೆಯಾಯ್ತು ಎಸ್ ಡಿ ಎಂ ಅಂಗಳದ  ಮಹಾ ನಕ್ಷತ್ರ : ಎಂದಿಗೂ ಮರೆಯಲಾಗದ ವ್ಯಕ್ತಿತ್ವ ಡಾ.ಯಶೋವರ್ಮಾ...

ಮರೆಯಾಯ್ತು ಎಸ್ ಡಿ ಎಂ ಅಂಗಳದ  ಮಹಾ ನಕ್ಷತ್ರ : ಎಂದಿಗೂ ಮರೆಯಲಾಗದ ವ್ಯಕ್ತಿತ್ವ ಡಾ.ಯಶೋವರ್ಮಾ ಅವರದ್ದು

spot_img
- Advertisement -
- Advertisement -

ಬೆಳ್ತಂಗಡಿ: ಕೆಲವೊಂದು ವ್ಯಕ್ತಿಗಳು, ಅವರ ವ್ಯಕ್ತಿತ್ವಗಳು ಅವರ ನಿರಂತರ ಸಂಪರ್ಕವಿಲ್ಲದಿದ್ದರೂ ತನ್ನಿಂದ ತಾನೇ ಸೆಳೆದು ಬಿಡುತ್ತದೆ. ಹೀಗೆ ಎಂತಹವರನ್ನು ಕೂಡ ಸೂಜಿಗಲ್ಲಿನಂತೆ ಎಳೆಯಬಲ್ಲ ವ್ಯಕ್ತಿತ್ವ ಡಾ.ಬಿ.ಯಶೋವರ್ಮಾ ಅವರದ್ದು. ಕಾಲೇಜಿನ ಕಾರಿಡಾರ್ ನಲ್ಲಿ ಅವರು ನಡೆದು ಬರುತ್ತಿದ್ದರೆ ಎಂತಹ ವಿದ್ಯಾರ್ಥಿಯಾದ್ರು ಒಂದು ಕ್ಷಣ ಅಲರ್ಟ್ ಆಗಿ ಬಿಡುತ್ತಿದ್ದ.


ಯಾರನ್ನೂ ಗದರದ, ಯಾರಿಗೂ ನೋವನ್ನುಂಟು ಮಾಡದ ವ್ಯಕ್ತಿತ್ವ ಯಶೋವರ್ಮಾ ಅವರದ್ದು.ಆದರೂ ಅದೇನೋ ಗೊತ್ತಿಲ್ಲ ವಿದ್ಯಾರ್ಥಿಗಳು ಅವರಿಗೆ ಭಯಪಡುತ್ತಿದ್ದರು. ಭಯ ಅನ್ನೋದಕ್ಕಿಂತ ಹೆಚ್ಚಾಗಿ ಒಂದೇನೋ ಒಂಥರಾ ಪದಗಳಲ್ಲಿ ವರ್ಣಿಸಲಾಗದ ಗೌರವ. ಆ ಮುಗುಳುನಗೆ ತುಂಬಿದ ಮುಖ, ಅವರ ನಡಿಗೆ, ಸದಾ ನೀಟಾಗಿರುವ ಅವರ ಉಡುಗೆ ಇದೆಲ್ಲವೂ ಎಂಥವರನ್ನಾದರೂ ಒಂದು ಕ್ಷಣ ಸೆಳೆದು, ಅವರ ಅಭಿಮಾನಿ ಅನ್ನೋ ಥರಾ ಮಾಡುತ್ತಿತ್ತು. ಒಬ್ಬ ಪ್ರಾಂಶುಪಾಲ ತಮ್ಮ ವ್ಯಕ್ತಿತ್ವದ ಮೂಲಕವೇ ಇಷ್ಟೊಂದು ಮಕ್ಕಳಿಗೆ ಮಾದರಿಯಾಗಬಲ್ಲರು ಎಂಬುವುದಕ್ಕೆ ಉತ್ತಮ ಉದಾಹರಣೆ ಯಶೋವರ್ಮಾ ಸರ್.


ಅಂದ್ಹಾಗೆ ಯಶೋವರ್ಮಾ ಅವರು ಬಾಲ್ಯದಿಂದಲೇ ಅತ್ಯಂತ ಚುರುಕು ಸ್ವಭಾವದವರು. ಬೆಳ್ತಂಗಡಿ ತಾಲೂಕಿನ ಪೆರಾಡಿ ಬೀಡು ನಿವಾಸಿಯಾದ ಅವರು, ಮೂಡುಬಿದಿರೆ ಜೈನ್ ಹೈಸ್ಕೂಲಿನ ‘ಕನ್ನಡ ಪಂಡಿತ’ರೆಂದೇ ಚಿರಪರಿಚಿತರಾಗಿದ್ದ ದಿವಂಗತ ಟಿ. ರಘು ಚಂದ್ರ ಶೆಟ್ಟಿ ಅವರ ಸುಪುತ್ರ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆಯವರ ಮುದ್ದಿನ ಸಹೋದರ. ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಯಶೋವರ್ಮಾ ಧಾರವಾಡದಲ್ಲಿ ಜೆಎಸ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.
ನಿವೃತ್ತರಾದರೂ ಸಾಕಷ್ಟು ಕ್ರಿಯಾಶೀಲರಾಗಿದ್ದ ಅವರು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದರು. ಉತ್ತಮ ವಾಗ್ಮಿ, ಶಿಸ್ತಿನ ಸಿಪಾಯಿ, ನೇರ ನಡೆ-ನುಡಿಯ ಅವರು ದಕ್ಷ ದಕ್ಷ ಆಡಳಿತಗಾರರಾಗಿದ್ದರು. ಉಜಿರೆಯನ್ನು ಜಾಗತಿಕ ನಕಾಶೆಯಲ್ಲಿ ಗುರುತಿಸುವಂತೆ ಭಗೀರಥ ಪ್ರಯತ್ನ ಮಾಡಿದವರು, ಶಿಸ್ತಿಗೆ ಇನ್ನೊಂದು ಹೆಸರೇ ಯಶೋವರ್ಮಾ ಸರ್.


ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಹಮ್ಮು ಬಿಮ್ಮಿಲ್ಲದ ತುಂಬಾ ಸಿಂಪಲ್ ಮನುಷ್ಯ. ಅದೇ ಕಾರಣಕ್ಕೆ ಎಲ್ಲರೂ ಅವರನ್ನು ಪ್ರೀತಿಸಿ ಮತ್ತು ಗೌರವಿಸುತ್ತಿದ್ದರು. ದೀರ್ಘಕಾಲದ ವರೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸಿದ್ದರು. 1986ರಲ್ಲಿ ಸೈಕಾಲಜಿ ಕ್ಷೇತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದ ಅವರು ಸಸ್ಯಶಾಸ್ತ್ರದ ತೀವ್ರ ಉತ್ಸಾಹಿ. ಈ ವಿಷಯದ ಕುರಿತಾಗಿ ಮತ್ತಷ್ಟು ಡಿಮಿಸ್ಟಿಫಿನೇಶನ್ ಗೆ ನಿರಂತರವಾಗಿ ಮಾಡಿದ ಕೆಲಸ ಫಲಿತಾಂಶ ರೂಪದಲ್ಲಿ ಕಂಡು ಬಂದಿವೆ. ಅವರ ಹೆಸರಿನಲ್ಲಿ ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಕಟಣೆಗಳೂ ಬಂದಿವೆ. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವಾರು ಸಮ್ಮೇಳನಗಳನ್ನು ಕೂಡ ನಡೆಸಿದ್ದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಸೇರಿದಂತೆ ಹಲವಾರು ಹುದ್ದೆಗಳ ಮೂಲಕ ಸೇವೆ ಸಲ್ಲಿಸಿದ್ದರು. ಎಸ್‌ಡಿಎಂಸಿ ಉಜಿರೆಯ ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ಕಾಲೇಜು ನ್ಯಾಕ್‌ನಿಂದ ಸತತ ಮೂರು ಬಾರಿ ‘ಎ’ ದರ್ಜೆಯ ಮಾನ್ಯತೆ ಪಡೆದಿತ್ತು. ಕಾಲೇಜು FJEI ಸ್ಥಾಪಿಸಿದ ಅತ್ಯುತ್ತಮ ಕಾಲೇಜಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆಯಿತು.
ಡಾ. ಬಿ ಯಶೋವರ್ಮ ಅವರು ಎಸ್‌ಡಿಎಂಸಿ ಉಜಿರೆಯನ್ನು ಹೊಂದಿದ್ದಂತೆಯೇ ಎಸ್‌ಡಿಎಂಇ ಸೊಸೈಟಿ ಮತ್ತು ಸೊಸೈಟಿಯಿಂದ ನಿರ್ವಹಿಸಲ್ಪಡುವ 56 ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಗಳು UGC ಮತ್ತು NAAC ಮಾನ್ಯತೆಗಳು, ಗಿನ್ನೆಸ್ ದಾಖಲೆಗಳು, ದಾಖಲೆ ನಿಯೋಜನೆಗಳು, ಅಭೂತಪೂರ್ವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಒಳಗೊಂಡಂತೆ ಸಾಧನೆಗಳನ್ನು ಕಂಡಿವೆ.


ತಮ್ಮ ಸ್ನೇಹಪರ ವ್ಯಕ್ತಿತ್ವ, ನಗುಮೊಗದಿಂದಲೇ ಉಜಿರೆಯಲ್ಲಿ ಕಲಿಯುತ್ತಿದ್ದ ವಿದ್ವಾರ್ಥಿಗಳಿಗೆ ಕಾಣುತ್ತಿದ್ದ ಡಾ.ಬಿ ಯಶೋವರ್ಮ ಅವರು, ಸಂಸ್ಥೆ ಮಾಜಿ ವಿದ್ಯಾರ್ಥಿಗಳೊಂದಿಗೂ ಅಷ್ಟೇ ಒಡನಾಟ ಹೊಂದಿದ್ದರು. ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಮಾತುಗಳನ್ನೇ ಬದುಕಿನಲ್ಲೂ ಅಳವಡಿಸಿಕೊಂಡಿದ್ದ ಅವರು ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ನೆಚ್ಚಿನ ಗುರುಗಳು, ಮಾದರಿ ವ್ಯಕ್ತಿ. ವಯಸ್ಸು 66 ಆದರೂ ಇಂದಿಗೂ ಚಿರ ಯುವಕನಂತೆ ಹೊಸ ವಿಷಯಗಳನ್ನು ಕಲಿಯಲು ಅವರು ತೋರುತ್ತಿದ್ದ ಉತ್ಸಾಹ ಎಲ್ಲರಿಗೂ ಮಾದರಿ. ಬದುಕಿನುದ್ದಕ್ಕೂ ತಮ್ಮ ವ್ಯಕ್ತಿತ್ವದ ಮೂಲಕವೇ ಗಮನ ಸೆಳೆದಿದ್ದ ಯಶೋವರ್ಮಾ ಸರ್ ಅವರು ಹೀಗೆ ಸಡನ್ ಹೋಗಿದ್ದು ಎಲ್ಲರಿಗೂ ಅರಗಿಸಿಕೊಳ್ಳಲಾಗದ ಆಘಾತ. ಅವರ ಹಾಕಿ ಕೊಟ್ಟ ಹಾದಿ ಎಲ್ಲರಿಗೂ ಸ್ಫೂರ್ತಿಯಾಗಲಿ. ಹೋಗಿ ಬನ್ನಿ ಸರ್..

- Advertisement -
spot_img

Latest News

error: Content is protected !!