Wednesday, May 15, 2024
Homeತಾಜಾ ಸುದ್ದಿಇನ್ನು ಸಿಕ್ಕಿಲ್ಲ ರಸ್ತೆ ಸಮಸ್ಯೆಗೆ ಮುಕ್ತಿ: ಬಂಟ್ವಾಳ ತಾಲೂಕಿನ ಅಡ್ಯಾಲು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಇನ್ನು ಸಿಕ್ಕಿಲ್ಲ ರಸ್ತೆ ಸಮಸ್ಯೆಗೆ ಮುಕ್ತಿ: ಬಂಟ್ವಾಳ ತಾಲೂಕಿನ ಅಡ್ಯಾಲು ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

spot_img
- Advertisement -
- Advertisement -

ಬಂಟ್ವಾಳ: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತ್​​ಗೆ ಒಳಪಟ್ಟ ಅಡ್ಯಾಲು ಎಂಬಲ್ಲಿ ಸುಮಾರು 10 ಮನೆಗಳಿದ್ದು, ಇಲ್ಲಿನ ಕುಟುಂಬಸ್ಥರು ಕಳೆದ 50 ವರ್ಷಗಳಿಂದ ನಡೆದಾಡಲೂ ಸರಿಯಾದ ದಾರಿಯಿಲ್ಲದೆ ಪರದಾಡುತ್ತಿದ್ದಾರೆ. ನಮಗೆ ರಸ್ತೆ ಮಾಡಿ ಕೊಡಿ ಎಂದು ಪ್ರಧಾನಿ, ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಪರಿಹಾರ ದೊರಕಿಲ್ಲ. ಇದೀಗ ಇಲ್ಲಿನ ಕುಟುಂಬಸ್ಥರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೋಟಾ ಮತದಾನದ ಮೂಲಕ ಅಭ್ಯರ್ಥಿಗಳ ಪರ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಅಡ್ಯಾಲುವಿನಲ್ಲಿ ಎಲ್ಲಾ ಮನೆಗಳಿಗೂ ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಮಳೆಗಾಲದಲ್ಲಂತೂ ಇವರ ಸಂಕಷ್ಟ ಹೇಳತೀರದಂತಿದೆ. ಪುತ್ತೂರು ಕಬಕ ರಸ್ತೆಯ ಕವಲು ದಾರಿಯಾದ ಅಡ್ಯಾಲು-ಕುಳ ರಸ್ತೆಯು ಸುಮಾರು 1 ಕೀ.ಮೀ ಉದ್ದವಿದ್ದು ಈ ರಸ್ತೆಯಲ್ಲಿ ಕೊನೆಯ 200 ಮೀ.ನಷ್ಟು ವ್ಯಾಪ್ತಿಯಲ್ಲಿ ರಸ್ತೆಯಿಲ್ಲದೆ ಕಾಲು ದಾರಿಯಾಗಿ ಮಾರ್ಪಟ್ಟಿದೆ . ಇಲ್ಲಿ ಸರಿಯಾದ ವಾಹನ ಸಂಚಾರ ಯೋಗ್ಯವಾದ ರಸ್ತೆ ನಿರ್ಮಾಣ ಮಾಡುವಂತೆ ಕಳೆದ 50 ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ನಮಗೆ ರಸ್ತೆ ವ್ಯವಸ್ಥೆ ಕಲ್ಪಿಸಿ ಎಂದು ಇಲ್ಲಿನ ಜನರು ಪ್ರಧಾನಮಂತ್ರಿ, ಮುಖ್ಯಮಂತ್ರಿಗೂ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿ ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್‌ಗೆ ಸೂಚನೆ ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಈ ಹಿಂದಿನ ಶಾಸಕರು ಹಾಗೂ ಈಗಿನ ಶಾಸಕರಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೂ ನೀಡಿದ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇಡ್ಕಿದು ಪಂಚಾಯತ್‌ಗೆ ನೀಡಿದ ಮನವಿಗಂತೂ ಲೆಕ್ಕವೇ ಇಲ್ಲ ಇಲ್ಲಿನ ಎನ್ನುತ್ತಾರೆ ಸ್ಥಳೀಯರು.

ನಮಗೆ ರಸ್ತೆ ಮಾಡಿ ಕೊಡದಿದ್ದಲ್ಲಿ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅಡ್ಯಾಲು ಕುಳದ ಎಲ್ಲಾ ಮತದಾರರೂ ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾನರ್ ಹಾಕಿ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆಗಿನ ಉಪವಿಭಾಗಾಧಿಕಾರಿಗಳು ರಸ್ತೆ ನಿರ್ಮಾಣದ ಮೌಖಿಕ ಭರವಸೆ ನೀಡಿ ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಅವರ ಭರವಸೆಯ ಮೇರೆಗೆ ಚುನಾವಣಾ ಬಹಿಷ್ಕಾರದಿಂದ ಇಲ್ಲಿನ ಜನ ಹಿಂದೆ ಸರಿದಿದ್ದರು.

ಆದರೆ ಉಪವಿಭಾಗಾಧಿಕಾರಿಗಳು ನೀಡಿದ ಭರವಸೆ ವಿಧಾನಸಭೆ ಚುನಾವಣೆ ಕಳೆದು ವರ್ಷಗಳೇ ಸಂದರೂ, ಈ ತನಕ ಇವರ ಬಳಿಗೆ ಬಂದವರಿಲ್ಲ. ಇವರ ಸಮಸ್ಯೆಯನ್ನು ಕೇಳಿದವರಿಲ್ಲ. ಅದಕ್ಕಾಗಿ ಇದೀಗ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದಾರೆ ಇಲ್ಲಿನ ಜನ.

- Advertisement -
spot_img

Latest News

error: Content is protected !!