ಬೆಳ್ತಂಗಡಿ; ನೀರು ಕುಡಿಯುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕರಾಯ ಗ್ರಾಮದಲ್ಲಿ ನಡೆದಿದೆ.
ಕರಾಯದ ಸುಹೈಬಾ (25) ಎಂಬವರು ದಿನಾಂಕ 11.05.2024 ರಂದು ಶನಿವಾರ ಬೆಳಿಗ್ಗೆ, ಮನೆಯ ಬಳಿಯಿದ್ದಾಗ, ಮನೆಯ ಅಂಗಳಕ್ಕೆ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಹೆಂಗಸು ಬಂದಿದ್ದಾರೆ. ಬಂದವರು ಸುಹೈಬಾ ಬಳಿ ಮಾತನಾಡಿ ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿ, ಕುಡಿಯಲು ನೀರು ಕೇಳಿದ್ದಾರೆ. ಸುಹೈಬಾ ನೀರು ತರಲು ಹೋದಾಗ ಬಂದ ಮಹಿಳೆ ಹಾಗೂ ಗಂಡಸು ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡ್ರೇಜ್ ಬಾಗಿಲು ತೆರೆದು ಹುಡುಕಾಡುತ್ತಿದ್ದರು. ಕೂಡಲೇ ಸುಹೈಬಾ ಬೊಬ್ಬೆ ಹಾಕಿ ತನ್ನ ಗಂಡನಿಗೆ ಕರೆ ಮಾಡಲು ಯತ್ನಿಸಿದ್ದು, ಆರೋಪಿಗಳು ಸುಹೈಬಾ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ, ಹಲ್ಲೆ ನಡೆಸಿ, ಚೂರಿಯನ್ನು ತೋರಿಸಿ ಬೆದರಿಸಿ, ಆಕೆಯ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿದ್ದಾರೆ.
ಇನ್ನು ಈ ವೇಳೆ ಸುಹೈಬಾ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಆರೋಪಿಗಳು ಬೈಕಿನಲ್ಲಿ ಪರಾರಿಯಾಗಿದ್ದು, ಅವರು ದೋಚಿದ ಆಭರಣಗಳ ಮೌಲ್ಯ ಅಂದಾಜು ಮೌಲ್ಯ ರೂ 1,00,000/- ಆಗಬಹುದು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


