Saturday, May 4, 2024
Homeತಾಜಾ ಸುದ್ದಿಹಪ್ಪಳ, ಸಂಡಿಗೆ ಮೇಲೆ ಬ್ಲ್ಯಾಕ್ ಫಂಗಸ್, ಯಲ್ಲೋ ಫಂಗಸ್ ಅಟ್ಯಾಕ್: ಹಪ್ಪಳ ಸಂಡಿಗೆ ರಕ್ಷಿಸಲು...

ಹಪ್ಪಳ, ಸಂಡಿಗೆ ಮೇಲೆ ಬ್ಲ್ಯಾಕ್ ಫಂಗಸ್, ಯಲ್ಲೋ ಫಂಗಸ್ ಅಟ್ಯಾಕ್: ಹಪ್ಪಳ ಸಂಡಿಗೆ ರಕ್ಷಿಸಲು ಮಹಿಳೆಯರ ಸರ್ಕಸ್

spot_img
- Advertisement -
- Advertisement -

ಮಂಗಳೂರು: ಪ್ರತಿ ಬಾರಿ ಬೇಸಿಗೆ ಕಾಲ ಆರಂಭವಾದ್ರೆ ಸಾಕು.. ಪ್ರಮುಖವಾಗಿ ದಕ್ಷಿಣಕನ್ನಡ ಉಡುಪಿ ಉತ್ತರಕನ್ನಡ ಭಾಗಗಳಲ್ಲಿ ಹೆಂಗಸರು ಮಕ್ಕಳು ಗಂಡಸರು ಎಲ್ಲಾ ಫುಲ್ ಬ್ಯುಸಿಯಾಗಿ ಬಿಡ್ತಾರೆ. ಹಲಸಿನ ಹಪ್ಪಳ, ಮರಗೆಣಸಿನ ಹಪ್ಪಳ, ಗೆಣಸಿನ ಹಪ್ಪಳ, ಸೆಂಡಿಗೆ, ಮಾವಿನ ಹಣ್ಣಿನ ಮಾಂಬಳ ಹೀಗೆ ಬ್ಯಾಚ್ ಬ್ಯಾಚ್ ಗಳಲ್ಲಿ ಹಪ್ಪಳ, ಸಂಡಿಗೆ ಮಾಡೋದಕ್ಕೆ ಶುರು ಮಾಡ್ತಾರೆ.

ಆದರೆ ಕಳೆದ ಎರಡು ವರ್ಷಗಳಿಂದ ಇದುವರೆಗೂ ಹಪ್ಪಳ, ಸಂಡಿಗೆ ಮಾಡಿ ಅನುಭವ ಇಲ್ಲದವರು ಕೂಡ ಹಪ್ಪಳ, ಸಂಡಿಗೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಅದಕ್ಕೆ ಕಾರಣ ದೂರದ ಚೀನಾದಿಂದ ಕರೆಯದೇ ಬಂದ ಕೊರೊನಾ ಅನ್ನೋ ಅತಿಥಿ. ಕೊರೊನಾ, ಲಾಕ್ ಡೌನ್ ಕಾರಣದಿಂದ ಅನೇಕರು ಮನೆಗಳಲ್ಲೇ ಲಾಕ್ ಆಗಿದ್ದಾರೆ. ಹಾಗಾಗಿ ಕಳೆದ ವರ್ಷ ಹಾಗೂ ಈ ವರ್ಷ ಹಪ್ಪಳ ತಯಾರಕರ ಕಠಿಣ ಶ್ರಮದಿಂದ ಹಪ್ಪಳ ಉದ್ಯಮ ಬಹಳ ಎತ್ತರಕ್ಕೆ ಬೆಳದು ನಿಂತಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಹೇಗಪ್ಪಾ ಸಮಯ ಕಳೆಯೋದು ಮನೇಲಿ ಅಂತಾ ಅಂದುಕೊಂಡವರಲ್ಲಿ ಅನೇಕರು ಹಪ್ಪಳ, ಸಂಡಿಗೆ ತಯಾರಿಕೆಯ ಮೊರೆ ಹೋಗಿದ್ದಂತೂ ಸುಳ್ಳಲ್ಲ. ಅದರಲ್ಲೂ ನಿರಂತರವಾಗಿ ಬಿಸಿಲಿದ್ದರಂತೂ ಕೆಲವರು ಇಡೀ ಕರ್ನಾಟಕಕ್ಕೆ ಹಂಚಬೇಕು ಅನ್ನೋ ರೇಂಜಿಗೆ ಹಪ್ಪಳ ತಯಾರಿಸಿದ್ದಾರೆ.

ಆದ್ರೆ ಇದೀಗ ಈ ಹಪ್ಪಳ ತಯಾರಿಸಿಟ್ಟ ನಮ್ಮ ಹೆಣ್ಮಕ್ಕಳಿಗೆ ಹೊಸ ತಲೆ ನೋವು ಶುರುವಾಗಿದೆ. ಅದೇನಪ್ಪಾ ಅಂದ್ರೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಅಂತಾ ದಿನಕ್ಕೊಂದು ಬಣ್ಣದಲ್ಲಿ ವೈರಸ್ ಗಳು ಪತ್ತೆಯಾಗುತ್ತಿವೆ. ಹಾಗಾಗಿ ಈ ವೈರಸ್ ಗಳು ನಾವು ತಯಾರಿಸಿದ ಹಪ್ಪಳ ಸಂಡಿಗೆ ಮೇಲೆ ಅಟ್ಯಾಕ್ ಮಾಡ್ಬೋದಾ ಅನ್ನೋ ಭಯ ಶುರುವಾಗಿದೆ.

ಅದರಲ್ಲೂ ಕರಾವಳಿಯಲ್ಲಿ ತೌಕ್ತೆ ಆರ್ಭಟದಿಂದ ಕೆಲವು ದಿನ ನಿರಂತರ ಮಳೆಯಾಗುತ್ತಿತ್ತು. ಇದೀಗ ಮತ್ತೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಪದೇ ಪದೇ ಮೋಡ ಕವಿದ ವಾತಾವರಣ ಇರೋದರಿಂದ ಕೆಲವು ಕಡೆ ಹಪ್ಪಳಗಳಿಗೂ ಬ್ಯಾಕ್ ಫಂಗಸ್ ಮತ್ತು ವೈಟ್ ಫಂಗಸ್ ತಗಲಿರುವ ಬಗ್ಗೆ ವರದಿಯಾಗಿದೆ.

ಹಾಗಾಗಿ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಹಪ್ಪಳ ತಯಾರಿಸುವವರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ಕಳೆದ ಕೆಲದಿನಗಳಿಂದ ಚಂಡಮಾರುತದ ಕಾರಣದಿಂದ ಹಲಸಿನ ಕಾಯಿ ಹಪ್ಪಳಗಳಿಗೆ ಎಲ್ಲಿಲ್ಲದ ಭೀತಿ ಎದುರಾಗಿದೆ. ಈಗಾಗಲೇ ಬಿಸಿಲು ಇದ್ದರೆ ಮಾತ್ರ ಹಪ್ಪಳ ತಯಾರಿಸುವಂತೆ ಸೂಚನೆ ಇದ್ದರೂ ಕೂಡ ಮನೇಲಿ ಜನ ಇದ್ದೇವೆ, ಜೊತೆಗೆ ಮತ್ತೆ ಹಲಸಿನಕಾಯಿ ಸಿಗಲಾರದೆಂಬ ಭೀತಿಯಿಂದ ಈಗಲೇ ಹಪ್ಪಳ ತಯಾರಿಸುತ್ತಿದ್ದಾರೆ. ಮನೆಯಂಗಳ ಫುಲ್ಲಾಗಿ, ಅಟ್ಟ ಫುಲ್ಲಾಗಿ ಆಗಿ ಮನೆಯ ಮಾಡನ್ನು ಸಹ ಹಪ್ಪಳ ಏರುತ್ತಿರುವುದು ಭೀತಿಗೆ ಕಾರಣವಾಗಿದೆ. ಅಲ್ಲಿಯೂ ಬಂದು ಫಂಗಸ್ ಆಟ್ಯಾಕ್ ಮಾಡಬಹುದು ಎಂದು ಹೆಂಗಸರು ಭಯ ಪಡುತ್ತಿದ್ದಾರೆ. ಇದರ ಮಧ್ಯೆ ಲಾಕ್ ಡೌನ್ ನಿಂದಾಗಿ ಗಂಡಸರು ಮನೆಯಲ್ಲಿಯೇ ಉಳಿದಿದ್ದಾರೆ. ಇದರಿಂದಾಗಿ ನಮಗೆ ಹಪ್ಪಳ ಮಾಡೋದಕ್ಕೆ ಜನ ಸಿಕ್ಕಿದಂತಾಯ್ತು ಅಂತಾ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತಿದ್ದಾರೆ.

ಕೆಲವೆಡೆ ಈಗಾಗಲೇ 50% ಹಪ್ಪಳಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು ಇದೇ ರೀತಿ ಮುಂದುವರಿದಲ್ಲಿ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇ  ಸೋಂಕಿತ ಹಪ್ಪಳಗಳನ್ನು ಮಹಿಳೆಯರು ಪರೀಕ್ಷಿಸಿ  ಬ್ಯಾಕ್ ಫಂಗಸ್ ಮತ್ತು ವೈಟ್ ಫಂಗಸ್ ಸೋಂಕಿತ ಹಪ್ಪಳಗಳನ್ನು ಬೇರೆ ಬೇರೆ ಡಬ್ಬಗಳಲ್ಲಿ ತುಂಬುತ್ತಿದ್ದು ಸೋಂಕಿತ ಹಪ್ಪಳಗಳನ್ನು ಅತೀ ಶೀಘ್ರದಲ್ಲಿ ಖರ್ಚು ಮಾಡಲು ಯೋಜಿಸಿರುತ್ತಾರೆ.  ಹೀಗೆ ಹಂತ ಹಂತವಾಗಿ ಹಪ್ಪಳಕ್ಕೆ ಅಟ್ಯಾಕ್ ಮಾಡಿರುವ ವೈರಸ್ ಗಳ ವಿರುದ್ಧ ಮಹಿಳೆಯರು ಬೇರೆ ಬೇರೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದು. ಕೆಲವು ಕಡೆ ಒಳ್ಳೆಯ ಫಲಿತಾಂಶ ದೊರೆತಿದೆ ಎನ್ನಲಾಗಿದೆ. ಇನ್ನು ಫಂಗಸ್ ಬಂದ ಹಪ್ಪಳಗಳನ್ನು ಬಟ್ಟೆಯಿಂದ  ಒರಸುವುದು, ಉಪ್ಪಿನ ನೀರಿನಿಂದ ತೊಳೆದು ಪುನಃ ಬಿಸಿಲಗೆ ಒಣಗಿಸೋದು, ತಯಾರಿಸಿ ಒಣಗಿಸಿದ ಬಳಿಕ ಪ್ಲ್ಯಾಸ್ಟಿಕ್ ಕವರ್ ಗಳಲ್ಲಿ ಚೆನ್ನಾಗಿ ಕಟ್ಟಿ ಇಡೋದರಿಂದ ಫಂಗಸ್ ಅಟ್ಯಾಕ್ ನಿಂದ ಹಪ್ಪಳ ಹಾಗೇ ಸಂಡಿಗೆಯನ್ನೂ ಕೂಡ ಇದೇ ವಿಧಾನದಲ್ಲಿ ಸಂರಕ್ಷಿಸಬಹುದು ಅಂತಾ ಈಗಾಗಲೇ ಹಪ್ಪಳದ ಮೇಲೆ ಅಟ್ಯಾಕ್ ಮಾಡಿದ್ದ ವೈರಸ್ ವಿರುದ್ಧ ಹೋರಾಡಿ ಗೆದ್ದ ಮಹಿಳೆಯರು ಹೇಳಿದ್ದಾರೆ.

ವಿ.ಸೂ:ಕೊರೊನಾ ಸಾವು ನೋವಿನ ಸುದ್ದಿಗಳು, ದಿನಕ್ಕೊಂದು ಬಣ್ಣದಲ್ಲಿ ಪತ್ತೆಯಾಗುವ ಫಂಗಸ್ ಗಳು ಇಂತಹ ಸುದ್ದಿಗಳನ್ನೇ ಓದಿ ಬೇಜಾರಾಗಿರುವ ನಿಮ್ಮ ಮನಸ್ಸನ್ನು ಒಂದಷ್ಟು ರಿಲ್ಯಾಕ್ಸ್ ಮಾಡೋದಕ್ಕಾಗಿ ಅಷ್ಟೇ ಈ ಲೇಖನ.. ತಮಾಷೆಯಾಗಿ ಸ್ವೀಕರಿಸಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.. ಮನೆಯಲ್ಲೇ ಇರಿ ಆರೋಗ್ಯವಾಗಿರಿ….

- Advertisement -
spot_img

Latest News

error: Content is protected !!