ಮಂಗಳೂರು: ವಂಚಕನೊಬ್ಬ ನಾಗರಿಕನಿಗೆ ಕರೆ ಮಾಡಿ ತಾನು ಬಿಎಸ್‌ಎನ್‌ಎಲ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಮತ್ತು ಕೆವೈಸಿ ಸಂಬಂಧಿತ ದಾಖಲೆಗಳನ್ನು ಕೇಳಿದ್ದಾನೆ.
ಹಾಗೇ ಚಂದಾದಾರರು ಕೆವೈಸಿಗೆ ಅಗತ್ಯ ದಾಖಲೆಗಳನ್ನು ನೀಡದಿದ್ದರೆ, ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾನೆ. ಎಚ್ಚೆತ್ತ ನಾಗರಿಕ ಆತನನ್ನು ಹೆಚ್ಚು ಪ್ರಶ್ನಿಸಲು ಆರಂಭಿಸಿದಾಗ ವಂಚಕ ಆತನನ್ನು ನಿಂದಿಸಿ ಕರೆ ಕಟ್ ಮಾಡಿದ್ದಾನೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆನ್‌ಲೈನ್ ವಂಚಕರು ಕೆವೈಸಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಒಟಿಪಿ ಮತ್ತು ಇತರ ದಾಖಲೆಗಳಂತಹ ವಿವರಗಳನ್ನು ನಾಗರಿಕರಿಗೆ ಕೇಳುವ ಈ ರೀತಿಯ ಅನೇಕ ನಿದರ್ಶನಗಳು ಹಿಂದೆಯೂ ಬೆಳಕಿಗೆ ಬಂದಿವೆ.
ಆದರೆ, ಅವರು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಆದರೆ ಈಗ ಕೆಲವರು ಕನ್ನಡದಲ್ಲೇ ಮಾತನಾಡುತ್ತಿದ್ದಾರೆ. ವಂಚಕರು ಕನ್ನಡ ಭಾಷೆಯಲ್ಲೇ ಮಾತನಾಡುವ ನೆಪದಲ್ಲಿ ಸಾರ್ವಜನಿಕರನ್ನು ನಂಬಿಸಿ ವಂಚನೆ ಮಾಡುತ್ತಿದ್ದಾರೆ.