
ಬೆಂಗಳೂರು: ನಗರದ ಪ್ರತಿಷ್ಠಿತ ಫೈವ್ಸ್ಟಾರ್ ಹಾಗೂ ತ್ರಿ-ಸ್ಟಾರ್ ಹೋಟೆಲ್ಗಳ ಮೇಲೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಅಡುಗೆಮನೆಗಳಲ್ಲಿ ಕಂಡುಬಂದ ಅಸ್ವಚ್ಛತೆ ಹಾಗೂ ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಕಂಡು ಸ್ವತಃ ಅಧಿಕಾರಿಗಳೇ ದಿಗ್ಭ್ರಮೆಗೊಂಡಿದ್ದಾರೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ನಿರ್ದೇಶನದಂತೆ ಜಾಗೃತರಾದ ಇಲಾಖೆಯ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳು ನಗರದಾದ್ಯಂತ ಏಕಕಾಲಕ್ಕೆ ಈ ಕಾರ್ಯಾಚರಣೆ ನಡೆಸಿವೆ. ನಗರದ ಖ್ಯಾತ ‘ಅಶೋಕ ಹೋಟೆಲ್’ ಮತ್ತು ‘ಶಾಂಗ್ರಿಲಾ ಹೋಟೆಲ್’ ಸೇರಿದಂತೆ ಹಲವು ಐಷಾರಾಮಿ ಹೋಟೆಲ್ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪಂಚತಾರಾ ಹೋಟೆಲ್ ಒಂದರ ಅಡುಗೆಮನೆಯಲ್ಲಿ ಸುಮಾರು 31 ಲೀಟರ್ ಹಾಳಾದ ಹಾಲು ಹಾಗೂ ಕೊಳೆತು ನಾರುತ್ತಿದ್ದ ತರಕಾರಿಗಳನ್ನು ಸಂಗ್ರಹಿಸಿಟ್ಟಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಇನ್ನು ಅವಧಿ ಮೀರಿದ ಆಹಾರ ಧಾನ್ಯಗಳು, ಸಾಸ್ಗಳು ಹಾಗೂ ಹಲವು ಸಂಸ್ಕರಿಸಿದ ಅಡುಗೆ ಸಾಮಗ್ರಿಗಳನ್ನು ಗ್ರಾಹಕರ ಅಡುಗೆಗೆ ಬಳಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. 30ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳು ಹೋಟೆಲ್ಗಳ ಸಂಗ್ರಹಣಾ ಕೊಠಡಿ ಹಾಗೂ ಅಡುಗೆಮನೆಗಳಿಗೆ ತೆರಳಿ ಶುಚಿತ್ವ ಮತ್ತು ಆಹಾರ ಸುರಕ್ಷತೆಯ ಗುಣಮಟ್ಟವನ್ನು ಕೂಲಂಕುಷವಾಗಿ ತಪಾಸಣೆ ನಡೆಸಿವೆ.
ನಿಯಮ ಉಲ್ಲಂಘಿಸಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಹೋಟೆಲ್ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.


