ಉಪ್ಪಿನಂಗಡಿ: ಹಿಂದೂ ಜಾಗರಣಾ ವೇದಿಕೆಯು ಮಂಗಳವಾರ ಹಳೆಗೇಟು ಬಳಿ ರಾಷ್ಟ್ರೀಯ
ಹೆದ್ದಾರಿ ತಡೆ ನಡೆಸಿದ್ದು, ಮೀನು ಮಾರಾಟದ ಶೆಡ್ ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಹಸಿ ಮೀನಿನ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು,24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ರಾಸ್ತಾ ರೋಕೋ ನಡೆಸಿ ಪ್ರತಿಭಟಿಸುವುದಾಗಿ ನಿನ್ನೆ ಎಚ್ಚರಿಕೆ ನೀಡಿದ ಹಿಂದೂ ಜಾಗರಣ ವೇದಿಕೆ, ಅದರಂತೆ ಇಂದು ಹಳಗೇಟು ಬಳಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಹಿಂದೂ ಯುವಕನೋರ್ವನ ಹಸಿಮೀನಿನ ಅಂಗಡಿಗೆ ಬೆಂಕಿ ಹಾಕುವ ಮೂಲಕ ಕಿಡಿಗೇಡಿಗಳು ಇಡೀ ಉಪ್ಪಿನಂಗಡಿಗೆ ಬೆಂಕಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. 2019 ರಲ್ಲಿ ಈತ ಮೀನು ಮಾರಾಟವನ್ನು ಆರಂಭಿಸಿದಾಗಲೂ ಹಲವಾರು ಜನ ವಿರೋಧಿಸಿದ್ದರು. ಆದರೆ ಆತ ಅದ್ಯಾವುದನ್ನು ಲೆಕ್ಕಿಸದೇ ಇಲ್ಲಿನ ಹಿಂದೂ ಬಾಂಧವರ ಸಹಕಾರದೊಂದಿಗೆ ಮೀನು ಮಾರಾಟವನ್ನು ಮಾಡಿ ಜೀವನ ನಡೆಸುತ್ತಿದ್ದ. ಆದರೆ ಈಗ ಇವನ ಏಳಿಗೆಯನ್ನ ಸಹಿಸದ ಕೆಲ ಕಿಡಿಗೇಡಿಗಳು ಆತಾ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೃತ್ಯವನ್ನು ಹಿಂದೂ ಜಾಗರಣಾ ವೇದಿಕೆ ಹಾಗೂ ಎಲ್ಲಾ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿದೆ. ಈ ಕೃತ್ಯವೆಸಗಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ರಾಸ್ತಾ ರೋಕೋ ಮಾಡುವುದಾಗಿ ನಾವು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ್ದೆವು. ಆದರೆ ಇವತ್ತು ಮಧ್ಯಾಹ್ನದವರೆಗೆ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ. ಆದ್ದರಿಂದ ಇಂದು ಹೆದ್ದಾರಿ ತಡೆ ಮಾಡುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಜಗದೀಶ್ ನೆತ್ತರ್ಕೆರೆ, ಪ್ರಶಾಂತ್ ಬಂಟ್ವಾಳ, ಮಲ್ಲೇಶ್ ಆಲಂಕಾರು, ರವೀಂದ್ರದಾಸ್ ಕುಂತೂರು, ಯು.ರಾಮ, ಪ್ರತಾಪ್ ಪೆರಿಯಡ್ಕ, ಸಂದೀಪ್ ಕುಪ್ಪೆಟ್ಟಿ, ಚಿದಾನಂದ ಪಂಚೇರ್, ರವಿ ತೆಕ್ಕಾರ್, ಸುಜೀತ್ ಬೊಳ್ಳಾವು, ರಂಜಿತ್ ಅಡೆಕ್ಕಲ್, ರಕ್ಷಿತ್ ಪೆರಿಯಡ್ಕ, ಅನಿಲ್ ಹಿರೇಬಂಡಾಡಿ, ಧನ್ಯರಾಜ್ ಬೊಳ್ಳಾರ್, ಸುನೀಲ್ ಬೊಳ್ಳಾರ್, ಪ್ರದೀಪ್ ಅಡೆಕ್ಕಲ್, ಸಂತೋಷ್ ಅಡೆಕ್ಕಲ್, ಜಿತೇಶ್ ಕಜೆಕ್ಕಾರ್, ಪವೀತ್ ಸುರ್ಯ, ನಿತೀನ್ ಅಣ್ಣಾಜೆ ಮತ್ತಿತರರು ಉಪಸ್ಥಿತರಿದ್ದರು.ಉಪ್ಪಿನಂಗಡಿ ಪೊಲೀಸರು ಬಂದೋ ಬಸ್ತ್ ಕಲ್ಪಿಸಿದ್ದರು.