ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ಈಗಾಗಲೇ ರಸ್ತೆ ಸಂಚಾರವು ಬಲು ಕಷ್ಟವಾಗಿದ್ದು ಈ ರಸ್ತೆಯಲ್ಲಿ ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಮಗಳಾದ 5ನೇ ತರಗತಿ ವಿದ್ಯಾರ್ಥಿನಿ ಅನರ್ಘ್ಯ(11)ಳನ್ನು ಕೂರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ತನ್ನ ವಾಹನದಲ್ಲಿ ನೇರವಾಗಿ ಹಿಂಬದಿಯ ಬೈಕ್‌ಗೆ ಜು.27 ರಂದು ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿದ್ದಳು. ತಂದೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿ ಹೊಡೆದ ಬಳಿಕ ವಾಹನ ಸಮೇತ ಆರೋಪಿಗಳು ಪರಾರಿಯಾಗಿದ್ದರು. ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದೀಗ ಬೆಳ್ತಂಗಡಿ ಸಂಚಾರಿ ಪೊಲೀಸರು ಗಂಭೀರ ಪ್ರಕರಣವಾಗಿದ್ದರಿಂದ ಧರ್ಮಸ್ಥಳ ಪೊಲೀಸರಿಗೆ ಪ್ರಕರಣ ಹಸ್ತಾಂತರ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಬೊಲೆರೊ ಚಾಲಕ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ನಿವಾಸಿ ಪ್ರಶಾಂತ್(31) ವಿರುದ್ಧ ಜು.28 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 105,125A BNS,134A&B, IMV Act ಅಡಿಯಲ್ಲಿ ಪ್ರಕರಣ ದಾಖಲು. ಆರೋಪಿ ಪ್ರಶಾಂತ್ ನನ್ನು ಬಂಧಿಸಿದ್ದು . ಮಹಜರು ಬಳಿಕ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿದ್ದಾರೆ.ಬೊಲೆರೊ ವಾಹನದಲ್ಲಿದ್ದ ಇತರ ಪಟ್ರಮೆಯ ರಿತೇಶ್, ದಿಡುಪೆಯ ದೀಪಕ್ ,ನೆರಿಯದ ಶೈಲೇಶ್ ಮೇಲೂ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರು ಎಫ್.ಎಸ್.ಎಲ್ ತಂಡದ ಸೋಕೋ ಸಿಬ್ಬಂದಿ ಅರ್ಪಿತಾ ಮತ್ತು ಕಾವ್ಯಶ್ರೀ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ ಮತ್ತು ತಂಡ ಬಂದು ಮೃತಪಟ್ಟ ಬಾಲಕಿಯ ಪರಿಶೀಲನೆ ಮಾಡಿ ಮಹಜರು ನಡೆಸಿದ್ದಾರೆ.
