Sunday, May 19, 2024
Homeತಾಜಾ ಸುದ್ದಿಲೈವ್ ನಲ್ಲೂ ಸರಿಯಾಗಿ ಉತ್ತರ ನೀಡಲಾಗದೆ ಪೇಚಾಡಿದ ಡ್ರೋನ್ ಪ್ರತಾಪ್..

ಲೈವ್ ನಲ್ಲೂ ಸರಿಯಾಗಿ ಉತ್ತರ ನೀಡಲಾಗದೆ ಪೇಚಾಡಿದ ಡ್ರೋನ್ ಪ್ರತಾಪ್..

spot_img
- Advertisement -
- Advertisement -

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸೋಶಿಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದವರು ಡ್ರೋನ್ ಪ್ರತಾಪ್. ಡ್ರೋನ್ ಪ್ರತಾಪ್ ಅವರು ಇಷ್ಟು ದಿನ ಎಲ್ಲರನ್ನು ಮಂಗ ಮಾಡಿದ್ದಾರೆ ಅಂತಾ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತಿವೆ. ಹೀಗಿರುವಾಗಲೇ ಖಾಸಗಿ ವಾಹಿನಿಯೊಂದರ ಲೈವ್ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಅವರು ಪ್ರತ್ಯಕ್ಷರಾಗಿ ನಾನು ಇದುವೆರಗೊ ಹೇಳಿದ್ದೆಲ್ಲಾ ನಿಜ ಅಂತಾ ಸಮರ್ಥಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಆದರೆ ಅಲ್ಲಿ ಅವರು ಮಾತನಾಡಿದ್ದು ಅವರ ಬಗ್ಗೆ ಇನ್ನಷ್ಟು ಸಂದೇಹ ಹುಟ್ಟು ಹಾಕುವಂತೆ ಮಾಡಿದ್ದಂತೂ ಸುಳಲ್ಲ.

ಖಾಸಗಿ ವಾಹಿನಿಯೊಂದರ ಲೈವ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಾಪ್​, ನಾನು ಇದುವರೆಗೂ ನಾನು ಹಾರಿಸಿದ್ದು ಕಾಗೆಯಲ್ಲ ಡ್ರೋನ್. ನಾನು ಖಂಡಿತವಾಗಿಯೂ ಡ್ರೋನ್​ ಮಾಡಿದ್ದೇನೆ. ಅದಕ್ಕಾಗಿ ಸಾಕಷ್ಟು ಸಂಶೋಧನೆಯನ್ನು ಮಾಡಿಕೊಂಡಿದ್ದೇನೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದರು.

ಜಪಾನ್​ನಿಂದ ಬಂದ ಎರಡು ಪ್ರಶಸ್ತಿ ಪ್ರಮಾಣ ಪತ್ರಗಳು ಹಾಗೂ ಜರ್ಮನಿಯಿಂದ ಬಂದ ಒಂದು ಪ್ರಮಾಣ ಪತ್ರ ಸೇರಿದಂತೆ ಚಿನ್ನದ ಪದಕಗಳು ಸಹ ಬಂದಿವೆ ಎಂದು ಹೇಳಿ ಪ್ರಮಾಣ ಪತ್ರ ಪ್ರದರ್ಶಿಸಿದರು. ಆದರೆ, ಪ್ರಮಾಣ ಪತ್ರದಲ್ಲಿ ವೆಹಿಕಲ್ ಎಂಬ ಪದದಲ್ಲಿ ಸ್ಪೆಲ್ಲಿಂಗ್​ ಮಿಸ್ಟೇಕ್​ ಇದೆಯಲ್ಲಾ, ಪ್ರತಿಷ್ಠಿತ ಯೂನಿವರ್ಸಿಟಿಗಳು ಈ ರೀತಿ ಪ್ರಮಾದ ಎಸಗುತ್ತವಾ ಎಂಬ ಪ್ರಶ್ನೆಗೆ, ನಾವು ಪ್ರಾಜೆಕ್ಟ್​ ಬರೆದು ಕೊಡಬೇಕಾದರೆ ಅದನ್ನೇ ಪ್ರಮಾಣ ಪತ್ರದ ಮೇಲೆ ಬರೆದಿರುವುದರಿಂದ ಪ್ರಮಾದವಾಗಿದೆ. ಆ ವೇಳೆ ನನಗೆ ಸರಿಯಾಗಿ ಇಂಗ್ಲಿಷ್​ ಬರುತ್ತಿರಲಿಲ್ಲ ಎಂದು ಸಮಜಾಯಿಷಿ ನೀಡಿದರು. ಇದು ವೀಕ್ಷಕರಲ್ಲಿ ಮತ್ತೆ ಪ್ರತಾಪ್ ಕಾಗೆ ಹಾರಿಸ್ತಿದ್ದಾರೆ ಅಂತಾ ಅನುಮಾನ ಮೂಡಿಸಿದ್ದಂತೂ ಸುಳ್ಳಲ್ಲ.

ಇದುವರೆಗೂ ಎಲ್ಲಿಯೂ ಡ್ರೋನ್​ ಹಾರಿಸಿಲ್ಲ ಎಂಬ ಆರೋಪಕ್ಕೆ, ಒಂದು ಖಾಸಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಡ್ರೋನ್​ ಹಾರಿಸಿದ್ದೇನೆ. ಉತ್ತರ ಕರ್ನಾಟಕದ ಪ್ರವಾಹದ ಸಂದರ್ಭದಲ್ಲೂ ನಾನು ಡ್ರೋನ್​ ಹಾರಿಸಿದ್ದೇನೆ ಎಂದರು. ನಾನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಓರ್ವ ವಿದ್ಯಾರ್ಥಿಯಾಗಿ. ಕಾಲೇಜು ಕಡೆಯಿಂದ ಮಾತ್ರ ನಾನು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ. ಆದರೆ, ಜನರು ಟ್ರೇಡ್​ ಡ್ರೋನ್​ ಪ್ರದರ್ಶನಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಕಾಲೇಜು ಸ್ಪರ್ಧೆಯ ಬಗ್ಗೆ ಮಾತನಾಡಲ್ಲ ಎಂದರು.

ನಿಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮವೇಕೆ ತೆಗೆದುಕೊಳ್ಳುತ್ತಿಲ್ಲ ಎಂದಿದ್ದಕ್ಕೆ ನಾನು ಕಾನೂನು ಕ್ರಮದ ಬಗ್ಗೆ ವಕೀಲರ ಬಳಿ ವಿಚಾರಿಸುತ್ತಿದ್ದೇನೆ. ನನಗೆ ಕಾನೂನಿಗೆ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಎಲ್ಲವನ್ನು ನೋಡಿಕೊಂಡು ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಪ್ರತಾಪ್​ ಹೇಳಿದರು.

ನಾನು ಕಾಲೇಜಿನಲ್ಲಿ ಫೇಲ್​ ಆಗಿರುವುದು ನಿಜ. ಒಂದು ಅಥವಾ ಎರಡು ವಿಷಯಗಳು ಬಾಕಿ ಉಳಿದುಕೊಂಡಿವೆ. ನಾನು ಸ್ಪರ್ಧೆ ಹಿನ್ನೆಲೆಯಲ್ಲಿ ಜಪಾನ್​ ಗೆ ಹೋಗಿದ್ದೆ. ಅದಾದ ಮೇಲೆ ಕೆಲವು ಕಾರಣಗಳಿಂದ ಪರೀಕ್ಷೆ ಪೂರ್ಣಗೊಳಿಸಲಾಗಲಿಲ್ಲ. ಹಾಗಂತ ಫೇಲ್​ ಆದವರೆಲ್ಲ ವಿಜ್ಞಾನಿ ಆಗಬಾರದಾ ಎಂದು ಪ್ರಶ್ನಿಸಿದ ಪ್ರತಾಪ್​, ಥಾಮಸ್​ ಆಲ್ವಾ ಎಡಿಸನ್ ಹಾಗೂ ಮಾರ್ಕ್ ಜುಕರ್ ಬರ್ಗ್ ಮುಂತಾದವರ ಹೆಸರನ್ನು ಉದಾಹರಣೆಯಾಗಿ ತೆಗೆದುಕೊಂಡರು.

ಸಾಕಷ್ಟು ಯೂನಿವರ್ಸಿಟಿಗಳಲ್ಲಿ ಭಾಷಣ​ ನೀಡಲು ಹೇಗೆ ಸಾಧ್ಯವಾಯಿತು ಎಂಬುದಕ್ಕೆ, ಒಸಾಕಾ ಮತ್ತು ಆಕ್ಸ್​ಫರ್ಡ್​ ಯೂನಿವರ್ಸಿಟಿಗೆ ನೇರವಾಗಿ ಭೇಟಿ ನೀಡಿ ಸೆಮಿನಾರ್​ ಗಳಲ್ಲಿ ಲೆಕ್ಚರ್ ನೀಡಿದ್ದೇನೆ. ಇನ್ನು ಕೆಲವು ಯೂನಿವರ್ಸಿಟಿಗಳಿಗೆ ಆನ್​ಲೈನ್​ನಲ್ಲಿ ಕ್ಲಾಸ್​ ತೆಗೆದುಕೊಂಡಿದ್ದೇನೆ. ಮಾತಿನ ಭರದಲ್ಲಿ ಕೆಲವೊಮ್ಮೆ ತಪ್ಪಾಗಿ ಮಾತನಾಡಿದ್ದೇನೆ ಎಂದರು.

ಫ್ರಾನ್ಸ್​ನಲ್ಲಿ ಪ್ರಾಜೆಕ್ಟ್​ ಒಂದರ ಕೆಲಸದ ವೇಳೆ ನನ್ನ ಅಡಿ 80 ಕೆಲಸಗಾರರು ಇದ್ದರು ಎಂಬುದಕ್ಕೆ ಪ್ರತಾಪ್ ಗೊಂದಲಾತ್ಮಕ ಉತ್ತರ ನೀಡಿ ನುಣುಚಿಕೊಂಡರು. ಯಾವ ಪ್ರಾಜೆಕ್ಟ್​, ಏನು ಕೆಲಸ ಎಂದು ಹೇಳಲಿಲ್ಲ. ಅದು ಕಂಪನಿ ಮತ್ತು ನನ್ನ ನಡುವಿನ ರಹಸ್ಯ ಒಪ್ಪಂದವಷ್ಟೇ ಎಂದು ಹಾರಿಕೆ ಉತ್ತರ ನೀಡಿದರು.

ಮರುಬಳಕೆ ವಸ್ತುಗಳನ್ನು ಬಳಸಿಕೊಂಡು 600 ಡ್ರೋನ್ ತಯಾರಿಸಿದ್ದೇನೆ ಎಂಬುದಕ್ಕೆ ಉತ್ತರ ನೀಡಿದ ಪ್ರತಾಪ್​, ಇದೇ ಡ್ರೋನ್​ಗೆ ಪ್ರಶಸ್ತಿ ಬಂದಿದ್ದು, ಎಂದು ಫೋಟೋವೊಂದನ್ನು ತೋರಿಸಿದರು. ಏಕೆ ಪ್ರದರ್ಶಿಸಿಲ್ಲ ಎಂಬ ಪ್ರಶ್ನೆಗೆ ಇದುವರೆಗೂ ಆ ಪ್ರಮೆಯವೇ ಬಂದಿಲ್ಲ ಎಂದರು. ಸರಿ ನಿಮ್ಮ ಡ್ರೋನ್​ಗಳಿಗೆ ಪೇಟೆಂಟ್​ ಇದೆಯಾ ಎಂದು ಕೇಳಿದ್ದಕ್ಕೆ ಇಲ್ಲವೆಂದರು. ನಾನು ವ್ಯಾಪಾರ ದೃಷ್ಟಿಕೋನದಿಂದ ಡ್ರೋನ್​ ತಯಾರಿಸಿಲ್ಲ. ಬದಲಾಗಿ ಅದನ್ನು ಸೇನೆಗೆ ನೀಡಬೇಕೆಂದುಕೊಂಡಿದ್ದೇನೆ. ಹೀಗಾಗಿ ಎಲ್ಲವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಗೊಂದಲದ ಉತ್ತರ ನೀಡಿ ಜಾರಿಕೊಂಡರು. ಲೈವ್ ನಲ್ಲಿ ಪ್ರತಾಪ್ ಎಲ್ಲ ಗೊಂದಲಗಳಿಗೆ ಉತ್ತರ ಕೊಡ್ತಾರೆ ಅಂತಾ ಕಾರ್ಯಕ್ರಮ ವೀಕ್ಷಿಸುತ್ತಿದ್ದವರ ತಲೆಗೆ ಕಾರ್ಯಕ್ರಮದ ಮೂಲಕ ಮತ್ತಷ್ಟು ಅನುಮಾನ ಬೀಜ ಬಿತ್ತಿದರು ಪ್ರತಾಪ್. ಇದೆಲ್ಲಾ ನೋಡ್ತಿದ್ದರೆ ಸದ್ಯಕ್ಕೆ ಜನ ಹೇಳ್ತಿರೋದಿಷ್ಟೇ ಪ್ರತಾಪ್ ನಿಮ್ಗೆ ಇದೆಲ್ಲಾ ಬೇಕಿತ್ತಾ ಅಂತಾ?..

- Advertisement -
spot_img

Latest News

error: Content is protected !!