ಬೆಂಗಳೂರು: ಈ ಹಿಂದೆ ತಾನೊಬ್ಬ ಯುವ ವಿಜ್ಞಾನಿ, ಹಳ್ಳಿಯ ಕಷ್ಟದ ಜೀವನದಲ್ಲಿ ಬೆಳೆದರೂ ನನ್ನ ಡ್ರೋನ್ ಆವಿಷ್ಕಾರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ ಎಂದು ಪುಂಗಿ ಉಗಿದ್ದ ಕಪಟ ವಿಜ್ಞಾನಿ ಡ್ರೋನ್ ಪ್ರತಾಪ್ ನ ಜೀವನಾಧಾರಿತ ಸಿನೆಮಾವೊಂದನ್ನು ಮಾಡಲು ಹೊರಟಿದ್ದ ನಿರ್ದೇಶಕರು ಈಗ ಹಿಂದೆ ಸರಿದು ದಯವಿಟ್ಟು ನನ್ನ ಹಣವನ್ನು ಹಿಂದಿರುಗಿಸಿ ಎಂದು ಹೇಳಿದ್ದಾರೆ.
ಈ ಹಿಂದೆ ‘ಅಮೃತವಾಣಿ’, ‘ಪೆರೋಲ್’ ಮತ್ತು ‘ಬರ್ಫಿ’ ಚಿತ್ರಗಳನ್ನು ನಿರ್ದೇಶಿಸದ್ದ ನಿರ್ದೇಶಕ ರಾಜಶೇಖರ್, ಕೆಲವು ತಿಂಗಳುಗಳ ಹಿಂದೆ ಡ್ರೋನ್ ಪ್ರತಾಪ್ ಸಾಧನೆಯನ್ನು ಗುರುತಿಸಿ ನಾಲ್ಕು ಜನ ಸ್ಪೂರ್ತಿಗೊಂಡು ಬೆಳೆಯಲಿ ಎಂಬ ಆಸೆಯಿಂದ ಅವರ ಕುರಿತು ಚಿತ್ರ ಮಾಡಬೇಕೆಂದು ಮುಂದಾಗಿದ್ದರು. ಸಿನೆಮಾ ಮಾಡುವ ಕುರಿತು ಪ್ರತಾಪ್ ಅವರನ್ನು ಭೇಟಿ ಮಾಡಿ ಈ ವಿಷಯ ಸಹ ಮಾತಾಡಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಾಪ್ ಹರಿಸಿದ್ದು ಡ್ರೋನ್ ಅಲ್ಲ, ಕಾಗೆ ಎಂದು ತಿಳಿದ ತಕ್ಷಣ ಚಿತ್ರ ಮಾಡುವ ಯೋಚನೆಯನ್ನು ಕೈ ಬಿಟ್ಟಿರುವ ರಾಜಶೇಖರ್, ಸಿನೆಮಾಗಾಗಿ ಮುಂಗಡವಾಗಿ ನೀಡಿದ್ದ ಒಂದು ಲಕ್ಷ ರೂ.ವನ್ನು ನೀಡುವಂತೆ ಮನವಿ ಮಾಡಿದ್ದಾರೆ.
ದೊಡ್ಡ ಸಂಭಾವನೆಗೆ ಬೇಡಿಕೆ
‘ಅವರ ಕಥೆಯನ್ನು ಚಿತ್ರ ಮಾಡುತ್ತಿರುವುದರಿಂದ, ಎರಡು ಲಕ್ಷ ಸಂಭಾವನೆ ಮತ್ತು ಲಾಭದಲ್ಲಿ 20 ಪರ್ಸೆಂಟ್ ಕೊಡಬೇಕು ಎಂದು ಪ್ರತಾಪ್ ಜತೆಗೆ ಒಪ್ಪಂದವಾಗಿತ್ತು. ಮುಂಗಡವಾಗಿ ಒಂದು ಲಕ್ಷ ರೂ. ಸಹ ಕೊಟ್ಟಿದ್ದೆ. ಆದರೆ, ಆರು ತಿಂಗಳ ಹಿಂದೆ ಭೇಟಿ ಮಾಡಿ, ಚಿತ್ರ ತಡವಾಗುತ್ತಿರುವುದರಿಂದ ಬೇರೊಬ್ಬರು ಚಿತ್ರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ ಎಂದು ಪ್ರತಾಪ್ ಹೇಳಿದರು.
ನಾನು ಅವರ ಕುರಿತ ಚಿತ್ರ ಮಾಡುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ನೋವಾದರೂ, ಬಿಟ್ಟು ಕೊಟ್ಟೆ. ಚಿತ್ರ ಮಾಡುವ ಯೋಚನೆಯನ್ನು ಸಂಪೂರ್ಣ ಕೈಬಿಟ್ಟಿದ್ದೇನೆ. ದಯವಿಟ್ಟು ಹಣವನ್ನು ಹಿಂದಿರುಗಿಸಲು ಅವರಿಗೆ ಮನವಿ ಮಾಡಿದ್ದೇನೆ’ ಎನ್ನುತ್ತಾರೆ ರಾಜಶೇಖರ್.
ಆದರೆ ಸದ್ಯ ಕೊರೋನಾ ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿರುವ ಡ್ರೋನ್ ಪ್ರತಾಪ್, ಪೋಲೀಸರ ಬಂಧನಕ್ಕೆ ಒಳಗಾಗಿದ್ದಾರೆ.


