ಕೊರೊನಾ ತಡೆಗಟ್ಟಲು ಇಡೀ ದೇಶವೇ ನಿಂತಿದೆ. ಪೊಲೀಸರು, ವೈದ್ಯರು ಸೇರಿದಂತೆ ಹಲವಾರು ಮಂದಿ ಹಗಲು – ರಾತ್ರಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅದರಲ್ಲೂ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರಲ್ಲೇ ನಿರತರಾಗಿದ್ದಾರೆ. ಮನೆ, ಮಕ್ಕಳು ಬಿಟ್ಟು ಆಸ್ಪತ್ರೆಗಳಲ್ಲೇ ಇದ್ದಾರೆ. ಇಂತಹ ವಾರಿಯರ್ಸ್ ಗೆ ಇದೀಗ ಸಲಾಂ ಮಾಡಲಾಗುತ್ತಿದೆ.
ಹೌದು, ದೇಶದೆಲ್ಲೆಡೆ ಕೊರೊನಾ ವಾರಿಯರ್ಸ್ ಗೆ ಹೂ ನೀಡುವ ಮೂಲಕ ಅನೇಕ ಮಂದಿ ಧನ್ಯವಾದ ಹೇಳುತ್ತಿದ್ದಾರೆ. ಇದೀಗ ಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಡಾ. ವಿಜಯಶ್ರೀ ಅವರಿಗೂ ಸಿಲಿಕಾನ್ ಸಿಟಿ ಮಂದಿ ಧನ್ಯವಾದ ಹೇಳಿದ್ದಾರೆ.
ಕೊರೊನಾ ರೋಗಿಗಳ ಸೇವೆ ಮಾಡಿ ಡ್ಯೂಟಿ ಮುಗಿಸಿಕೊಂಡು ಮನೆಗೆ ವಿಜಯಶ್ರಿ ವಾಪಾಸಾಗಿದ್ದರು. ಈ ವೇಳೆ ಅವರ ಅಕ್ಕಪಕ್ಕದ ಮನೆಯವರು, ಕುಟುಂಬಸ್ಥರು ಚಪ್ಪಾಳೆಯ ಮೂಲಕ ವೈದ್ಯೆಯನ್ನ ಸ್ವಾಗತಿಸಿದರು. ಈ ಘಳಿಗೆಯನ್ನು ನೋಡಿದ ವಿಜಯಶ್ರಿ ಭಾವುಕರಾಗಿದ್ದಾರೆ. ಇನ್ನು ಈ ವಿಡಿಯೋವನ್ನು ಮೇಯರ್ ಗೌತಮ್ ಕುಮಾರ್ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಕಣ್ಣಿಗೆ ಕಾಣೋ ದೇವರು ವೈದ್ಯರು. ಅವರ ಕೆಲಸ ನಿಜಕ್ಕೂ ದೇವರ ಕೆಲಸಕ್ಕೆ ಸಮಾನ. ಇಂತವರಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ಹೊಗಳಿದ್ದಾರೆ.