Thursday, May 16, 2024
Homeಅಪರಾಧಬೆಳ್ತಂಗಡಿ: ಯುವಕನ ಹತ್ಯೆ ಪ್ರಕರಣ-ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬೆಳ್ತಂಗಡಿ: ಯುವಕನ ಹತ್ಯೆ ಪ್ರಕರಣ-ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

spot_img
- Advertisement -
- Advertisement -

ಮಂಗಳೂರು: ಬೆಳ್ತಂಗಡಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಕಾರಿನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಆರು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ ಪ್ರಕಟವಾಗಿದೆ.

ಬೆಳ್ತಂಗಡಿಯ ದಿಡುಪೆ ನಿವಾಸಿ ಸುರೇಶ್ ನಾಯ್ಕ (30) ಕೊಲೆಯಾದವರು. ಬೆಳ್ತಂಗಡಿಯ ನಾವೂರ ನಿವಾಸಿ ಆನಂದ ನಾಯ್ಕ (39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39), ಚಾರ್ಮಾಡಿ ನಿವಾಸಿ ವಿನಯ ಕುಮಾರ್ (34), ಮೂಡುಕೋಡಿ ನಿವಾಸಿ ಪ್ರಕಾಶ್ (35), ಬಂಟ್ವಾಳ ಪುದು ನಿವಾಸಿ ಲೋಕೇಶ್ (38), ಮೇಲಂತಬೆಟ್ಟು ನಿವಾಸಿ ನಾಗರಾಜ (43) ಪ್ರಕರಣದ ಆರೋಪಿಗಳು.

ಪ್ರಕರಣದ ವಿವರ: ನಾವೂರ ಮೂಲದ ಆನಂದ ನಾಯ್ಕ ಎಂಬಾತನಿಗೆ ಮದುವೆಯಾಗಿ ಅದಾಗಲೇ ಮಕ್ಕಳಿದ್ದವು. ಇದರ ಹೊರತಾಗಿಯೂ ಈತ ಪರಿಚಯದ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಯುವತಿಯನ್ನು ಮದುವೆಯಾಗುವ ಹಠಕ್ಕೆ ಬಿದ್ದು, ಯುವತಿಯ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ. ಆದರೆ ಯುವತಿ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕೆಲವು ದಿನಗಳ ನಂತರ ದಿಡುಪೆ ನಿವಾಸಿ ಸುರೇಶ್ ನಾಯ್ಕ ಜತೆ ಯುವತಿಯ ಮದುವೆ ಸಂಬಂಧ ಕೂಡಿ ಬಂದಿತ್ತು. 2017ರ ಎಪ್ರಿಲ್ 30ರಂದು ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿತ್ತು. ಈ ವಿಷಯ ಆನಂದ ನಾಯ್ಕ ಗಮನಕ್ಕೆ ಬಂದಿದೆ. ಯುವತಿಯ ಮನೆಯವರಲ್ಲಿ ಸುರೇಶ್ ನಾಯ್ಕನ ಮೊಬೈಲ್ ನಂಬರ್ ಸಂಗ್ರಹಿಸಿ ‘ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು’ ಎಂದು ಒತ್ತಾಯಿಸಿದ್ದಾನೆ.

ಇದಕ್ಕೆ ಒಪ್ಪದಿದ್ದಾಗ ಸುರೇಶ್ ನಾಯ್ಕರಿಗೆ ಜೀವ ಬೆದರಿಕೆಯನ್ನೂ ಆರೋಪಿ ಹಾಕಿದ್ದಾನೆ. ನಂತರ 2017 ಜುಲೈ 29ರಂದು ಎರಡನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತನು ಸುರೇಶ್ ಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ‘ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಉಜಿರೆಗೆ ಬನ್ನಿ’ ಎಂದು ತಿಳಿಸಿದ್ದಾನೆ. ಅದರಂತೆ ಸುರೇಶ್ ನಾಯ್ಕ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ್ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಮಾರುತಿ ಓಮ್ನಿಯಲ್ಲಿ ಸುರೇಶ್ ನನ್ನು ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಯುವಕನಲ್ಲಿ ಮದುವೆ ನಿರಾಕರಿಸಲು ತಂಡ ಒತ್ತಡ ಹಾಕಿದ್ದು, ಇದಕ್ಕೆ ಒಪ್ಪದಿದ್ದಾಗ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ.

ನಂತರ ಆನಂದ್ ನಾಯ್ಕ ಸೇರಿ ಧರ್ಮಸ್ಥಳದ ಅವೆಕ್ಕಿಯ ತಗ್ಗು ಪ್ರದೇಶದಲ್ಲಿ ಮೃತದೇಹಕ್ಕೆ ಗೋಣಿ ಚೀಲವನ್ನು ಸುತ್ತಿ ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಸುಟ್ಟು ಹಾಕಿದ್ದಾರೆ. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯೂರು ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಸುಟ್ಟು ಹಾಕಿದ್ದರು. ಈ ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರು ಮಂದಿ ಆರೋಪಿಗಳನ್ನು ಮೇ 4ರಂದು ಬಂಧಿಸಲಾಗಿತ್ತು.

ಬೆಳ್ತಂಗಡಿ ಪೊಲೀಸ್ ಠಾಣೆಯ ಆಗಿನ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಅವರು ಸಮಗ್ರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗಳ ವಿರುದ್ಧ ಐಪಿಸಿ 302 (ಕೊಲೆ), 201 (ಸಾಕ್ಷ್ಯನಾಶ), 120ಬಿ (ಸಂಚು), 149 (ಸಮಾನ ಉದ್ದೇಶಿತ ಕೃತ್ಯ) ಪ್ರಕರಣ ಸಾಬೀತುಗೊಂಡಿದೆ. ಪ್ರಕರಣದಲ್ಲಿ 33 ಮಂದಿ ಸಾಕ್ಷಿ ವಿಚಾರಣೆ ನಡೆಸಲಾಗಿದೆ.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ವಾದಿಸಿದ್ದರು. ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಬಂಟ್ವಾಳ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್ ನೇತ್ರತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ,ಪ್ರವೀಣ್ ದೇವಾಡಿಗ , ವೆಂಕಟೇಶ್ ನಾಯ್ಕ್ , ಬೆನ್ನಿಚನ್, ಪ್ರಮೋದ್ ನಾಯ್ಕ್, ಬಿಜು ,ತಂತ್ರಿಕ ವಿಭಾಗದ ದಿವಕರ್, ಸಂಪತ್ ,ತಾರಾನಾಥ್ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!