ಮಂಗಳೂರು:ನಗರದ ಬೆಂದೂರ್ ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಶವಾಗಾರದಲ್ಲಿ ಇರಿಸಲಾಗಿದ್ದ ಹರೀಶ್ ಶೆಟ್ಟಿ ಎಂಬುವವರ ಮೃತದೇಹದಿಂದ ವಜ್ರದ ಕಿವಿ ಓಲೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ,ಕದ್ರಿ ಪೊಲೀಸರು ಕಿವಿ ಓಲೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದ ಹರೀಶ್ ಶೆಟ್ಟಿ ಮಾಲ್ ಒಂದರಲ್ಲಿ ಭದ್ರತಾ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲಾಗಿತ್ತಾದರೂ, ಮೃತದೇಹದ ಕಿವಿಯಲ್ಲಿನ ವಜ್ರದ ಓಲೆ ಹಾಗೆಯೇ ಬಿಡಲಾಗಿತ್ತು.

ಅಂತ್ಯಕ್ರಿಯೆಯ ಸಮಯದಲ್ಲಿ ಸಂಬಂಧಿಕರು ಓಲೆಗಳನ್ನು ತೆಗೆಯಲು ಯೋಜಿಸಿದ್ದರು ಈ ಬಗ್ಗೆ ಶವಾಗಾರದ ಕಾವಲು ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಆದರೆ ಮರುದಿನ ಮೃತದೇಹದಿಂದ ಕಿವಿ ಓಲೆ ಕಾಣೆಯಾಗಿತ್ತು. ಈ ಬಗ್ಗೆ ಸೆಕ್ಯುರಿಟಿ ಗಾರ್ಡ್ ಬಳಿ, ಕಾಣೆಯಾದ ಓಲೆಗಳ ಬಗ್ಗೆ ಕೇಳಿದಾಗ, ತನಗೇನೂ ತಿಳಿದಿಲ್ಲ ಎಂದು ಉತ್ತರಿಸಿದ್ದ.
ನಂತರ ಕದ್ರಿ ಪೊಲೀಸರಿಗೆ ವಿಷಯದ ಕುರಿತು ತಿಳಿಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೆಕ್ಯುರಿಟಿ ಗಾರ್ಡ್ ವಿಚಾರಿಸಿದಾಗ ಆತನೇ ಕದ್ದಿರುವುದು ಗೊತ್ತಾಗಿದ್ದು, ಅದರ ನಂತರ ಅವರು ಹರೀಶ್ ಶೆಟ್ಟಿಯ ಕುಟುಂಬ ಸದಸ್ಯರಿಗೆ ಕಿವಿ ಓಲೆಯನ್ನು ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರು ತಿಂಗಳ ಹಿಂದೆ ಸಂಬಂಧಪಟ್ಟ ಸೆಕ್ಯುರಿಟಿ ಗಾರ್ಡ್ ಕರ್ತವ್ಯಕ್ಕೆ ಸೇರಿದ್ದು, ಈ ರೀತಿ ಕದಿಯುತ್ತಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಯಾವುದೇ ಸುಳಿವು ಇರಲಿಲ್ಲ . ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಆಸ್ಪತ್ರೆಯು ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ಆಸ್ಪತ್ರೆಯ ಮ್ಯಾನೇಜರ್ ಹೇಳಿದ್ದಾರೆ.