ಬೆಂಗಳೂರು: ಫೆಬ್ರವರಿ 20 ರಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಸಮಾವೇಶದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಕೂಗಿದ್ದ ಅಮೂಲ್ಯ ಲಿಯೋನಾಗೆ ಹೈಕೋರ್ಟ್ ನಲ್ಲಿ ಮತ್ತೆ ಮುಖಭಂಗವಾಗಿದೆ.
ಆಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಒಂದೊಮ್ಮೆ ಆಕೆಗೆ ಜಾಮೀನು ದೊರೆತರೆ ಬೇರೆ ರೀತಿಯ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸಮಾಜಕ್ಕೂ ಒಳಿತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅಮೂಲ್ಯ ಅವರ ವಿರುದ್ಧ ದೇಶದ್ರೋಹ ಹಾಗೂ ಸಮಾಜದಲ್ಲಿ ದ್ವೇಷ ಹೊತ್ತಿಸುವ ಆರೋಪವಿದೆ. ಒಂದೊಮ್ಮೆ ಅಮೂಲ್ಯಳಿಗೆ ಜಾಮೀನು ದೊರೆತರೆ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾ. ವಿದ್ಯಾಧರ್ ಶಿರಹಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದ ಹುಡುಗಿ. ಆಕೆಗೆ ಇನ್ನೂ 20 ವಯಸ್ಸು. ಆದರೆ ಎಡಪಂಥೀಯ ಚಿಂತಕಿ ಅಂತ ಕರೆಸಿಕೊಂಡ ಅಮೂಲ್ಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಶಾ ವಿರುದ್ಧ, ಸರಕಾರದ ಧೋರಣೆಗಳ ಬಗ್ಗೆ ಮಾತನಾಡಿ ಜನಪ್ರೀಯತೆ ಗಳಿಸಿಕೊಂಡಿದ್ದಳು.