ಬಂಟ್ವಾಳ: ವಾಹನವೊಂದಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಬೆಂಗಳೂರು ಮೂಲದ ವ್ಯಕ್ತಿಯೋರ್ವನಿಗೆ ಮನೆಮಂದಿಯ ಎದುರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಸಹೋದರಿಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.
ಕಣ್ಣೂರು ನಿವಾಸಿಗಳಾದ ಇಸ್ಮಾಯಿಲ್ ಯಾನೆ ಬಾತಿಶ್ ಹಾಗೂ ಯಸೀನ್ ಬಂಧಿತ ಆರೋಪಿಗಳು. ಬ್ರಹ್ಮರಕೋಟ್ಲು ಟೋಲ್ ನಲ್ಲಿ ಎರಡು ಕಾರುಗಳ ನಡುವೆ ಸೈಡ್ ಕೊಡುವ ವೇಳೆ ಕಾರೊಂದರ ಸೈಡ್ ಮಿರರ್ ಗೆ ಡಿಕ್ಕಿಯಾಗಿದೆ. ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾರೆ. ಬೆಂಗಳೂರು ಮೂಲದ ನಿವಾಸಿ ಭಾಸ್ಕರ್ ಪೈ ಅವರು ಉಡುಪಿಗೆ ಕಾರ್ಯಕ್ರಮವೊಂದಕ್ಕೆ ಮನೆಮಂದಿಯ ಜೊತೆಯಲ್ಲಿ ತೆರಳಿ ಕಾರ್ಯಕ್ರಮ ಮುಗಿಸಿ ವಾಪಾಸಾಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಇಬ್ಬರು ಸೇರಿ ಮನೆಯವರ ಎದುರಿನಲ್ಲಿಯೇ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ್ದಾರೆ. ನೆಲಕ್ಕುರಳಿಸಿ ಕಾಲಿನಿಂದ ಒದೆಯುವ ದೃಶ್ಯ ಹಾಗೂ ಮನೆಮಂದಿ ಬಿಡುವಂತೆ ಗೋಳಾಡುವ ದೃಶ್ಯ ಟೋಲ್ ಗೇಟ್ ನಲ್ಲಿರುವ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಭಾಸ್ಕರ್ ಪೈ ಅವರ ದೂರಿನಂತೆ ವೀಡಿಯೋ ಆಧಾರದ ಮೇಲೆ ಪೋಲೀಸರು ಕಣ್ಣೂರು ನಿವಾಸಿಗಳಾದ ಸಹೋದರರನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ನಗರ ಠಾಣಾ ಎಸ್ಐ ಅವಿನಾಶ್ ಗೌಡ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.