ಉತ್ತರಕನ್ನಡದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡಕುಸಿತದಲ್ಲಿ ಸಾವನ್ನಪ್ಪಿದ ವೃದ್ಧೆಯೊಬ್ಬರ ಮೃತದೇಹವನ್ನು ಮಾರ್ಟಂ ಬಳಿಕ ಅವರ ಮನೆಗೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಸಹಕರಿಸಿದ ದಕ್ಷಿಣಕನ್ನಡ ಜಿಲ್ಲೆಯ ಪತ್ರಕರ್ತರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸನ್ಮಾನಿಸಿದ್ದಾರೆ.
ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್ ಕಲ್ಕಟ್ಟ, ಗಿರೀಶ್ ಮಳಲಿ ಹಾಗೂ ಶಿವಶಂಕರ್ ಅವರ ಮಾನವೀಯ ಕಾರ್ಯದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯ್ಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದ್ದಾರೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದರು. ಇದೇ ವೇಳೆ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಅಧ್ಯಕ್ಷ ವಸಂತ್ ಎನ್. ಕೊಣಾಜೆ, ಗಣೇಶ್ ತಲಪಾಡಿ ಉಪಸ್ಥಿತರಿದ್ದರು.