ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ “ಚಡ್ಡಿ ಗ್ಯಾಂಗ್’ ಎಂಬ ಕಳ್ಳರ ತಂಡ ಕ್ರಿಯಾಶೀಲ ವಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ತಂಡದಲ್ಲಿ ಹೈದರಾಬಾದ್, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆಗಳ ಕಳ್ಳರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಡ್ಡಿಗ್ಯಾಂಗ್ ಈ ಹಿಂದೆಯೂ ದ.ಕ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮನೆ ಕಳ್ಳತನ ಕೃತ್ಯ ನಡೆಸಿತ್ತು. ಶನಿವಾರ ರಾತ್ರಿ ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಮನೆ ಕಳ್ಳತನ ಘಟನೆ ನಡೆದಿದ್ದು, ಇದೇ ತಂಡ ಕೃತ್ಯವೆಸಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ.
ಚಡ್ಡಿಗ್ಯಾಂಗ್ ಕಳ್ಳರು ಮೈಮೇಲೆ ಚಡ್ಡಿ, ಬನಿಯಾನ್, ತಲೆ ಮೇಲೊಂದು ಬಟ್ಟೆ ಸುತ್ತಿಕೊಳ್ಳುತ್ತಾರೆ. ಸೊಂಟದಲ್ಲಿ ಆಯುಧಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ನಿರಂತರ ಮಳೆಯಾಗುವ ದಿನಗಳಲ್ಲಿ ರಾತ್ರಿ ವೇಳೆ ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ಇಂತಹ ತಂಡ ಕಾರ್ಯಾಚರಣೆಗೆ ಇಳಿಯುತ್ತದೆ ಎನ್ನುತ್ತಾರೆ ಪೊಲೀಸರು.
ಕೋಡಿಕಲ್‌ನ ವಿವೇಕಾ ನಂದ ನಗರದಲ್ಲಿ ರವಿವಾರ ನಸುಕಿನ ವೇಳೆ ಮನೆಯವರು ಮಲಗಿದ್ದಾಗ ಕಳ್ಳರು ನುಗ್ಗಿದ್ದು, 2.04ರ ಸುಮಾರಿಗೆ ಮನೆಯ ಕಿಟಕಿಯ ಸರಳುಗಳನ್ನು ಕಿತ್ತು ಒಳನುಗ್ಗಿರುವ ಸುಮಾರು 5 ಮಂದಿ ಕಳ್ಳರು ಮನೆಯ ಕೋಣೆಯೊಂದರಲ್ಲಿ ಜಾಲಾಡಿ ಬಳಿಕ ಮನೆಯವರು ಮಲಗಿದ್ದ ಬೆಡ್‌ರೂಮ್‌ಗೂ ಪ್ರವೇಶಿಸಿದ್ದಾರೆ. ಕಪಾಟಿನಲ್ಲಿ ಇಟ್ಟಿದ್ದ 10,000 ರೂ. ನಗದು ಕಳವು ಮಾಡಿದೆ. ಘಟನೆ ಮರುದಿನ ಎದ್ದಾಗಲೇ ಮನೆ ಮಂದಿಯ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಡ್ಡಿಯಲ್ಲೇ ಬಂದಿದ್ದ ಕಳ್ಳರು; ಕೃತ್ಯ ನಡೆದಿರುವ ಮನೆಯ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ಕಳ್ಳರ ಕೃತ್ಯದ ಕೆಲವು ದೃಶ್ಯಗಳು ಸೆರೆಯಾಗಿವೆ. ಚಡ್ಡಿ ಧರಿಸಿರುವ 5 ಮಂದಿ ಕಳ್ಳರು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ಮನೆಯ ಬಳಿ ನಸುಕಿನ ವೇಳೆ 2.04ಕ್ಕೆ ಒಳಪ್ರವೇಶಿಸಿ 3.42ಕ್ಕೆ ವಾಪಸಾಗಿದ್ದಾರೆ. ಓರ್ವನ ಬಳಿ ಬ್ಯಾಗ್ ಇತ್ತು. ಈ ಮನೆ ರಸ್ತೆ ಪಕ್ಕದಲ್ಲೇ ಇದ್ದು ಇದರ ಅಕ್ಕಪಕ್ಕವೂ ಮನೆಗಳಿವೆ. ಕಳ್ಳರು ಮನೆಯಿಂದ ಹೊರಗೆ ಬರುವಾಗ ರಸ್ತೆಯಲ್ಲಿ ವಾಹನವೊಂದು ಹಾದು ಹೋಗಿದೆ. ಅದನ್ನು ಕಂಡು ಗೇಟ್ ಬಳಿಯಲ್ಲೇ ನಿಂತ ಕಳ್ಳರು ಅನಂತರ ರಸ್ತೆಗೆ ಬಂದಿದ್ದಾರೆ. ಅಲ್ಲದೆ ಬೊಗಳುತ್ತಿದ್ದ ನಾಯಿಯ ಕಡೆಗೆ ಓರ್ವ ಕಳ್ಳ ಕಲ್ಲು ಎಸೆಯುತ್ತಿರುವುದು ಕೂಡ ಸಿಸಿ ಕೆಮರಾ ದೃಶ್ಯದಲ್ಲಿದೆ. ಕಳ್ಳರ ಡ್ರೆಸ್ ಕೋಡ್ ನೋಡಿದರೆ ಅದು ಚಡ್ಡಿ ಗ್ಯಾಂಗ್‌ನ ಡ್ರೆಸ್‌ಕೋಡ್‌ನ್ನು ಹೋಲುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.