ಸುರತ್ಕಲ್: ಇಲ್ಲಿನ ತಡಂಬೈಲ್ ವೆಂಕಟರಮಣ ಕಾಲನಿಯ ಮನೆಯೊಂದರಲ್ಲಿ ಬುಧವಾರದಂದು ಮಧ್ಯಾಹ್ನ ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.
ತಡಂಬೈಲ್ ವೆಂಕಟರಮಣ ಕಾಲನಿಯ ನಿವಾಸಿ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಗಾಯಾಳುಗಳು.
ಗಾಯಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ವಸಂತಿ ಅವರಿಗೆ ಗ್ಯಾಸ್ ಸೋರಿಕೆಯಾಗಿರುವುದು ಗಮನಕ್ಕೆ ಬಾರದ್ದರಿಂದ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ ಆನ್ ಮಾಡಿ ಬೆಂಕಿ ಹಚ್ಚುತ್ತಿದ್ದಂತೆ ಹಟತ್ತಾನೆ ಬೆಂಕಿ ವ್ಯಾಪಿಸಿಕೊಂಡಿತು. ಅವರು ಸಹಾಯಕ್ಕಾಗಿ ಕೂಗಿದಾಗ ಹೊರಗೆ ಬಟ್ಟೆ ಒಗೆಯುತ್ತಿದ್ದ ಪುಷ್ಪಾ ಧಾವಿಸಿ ಬಂದು ಹೊರಗಿನಿಂದ ಬಾಗಿಲು ತೆರೆಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಅವರಿಗೂ ಚಾಚಿತು. ಅವರಿಬ್ಬರ ಕಿರುಚಾಟ ಕೇಳಿ ಅಕ್ಕಪಕ್ಕದವರು ಧಾವಿಸಿ ಇಬ್ಬರನ್ನೂ ಹೊರಗೆಳೆದು ಬೆಂಕಿ ನಂದಿಸಲು ಸಹಾಯ ಮಾಡಿದರು. ಆಗಲೇ ವಸಂತಿ ಧರಿಸಿದ್ದ ಸೀರೆ ಅವರ ಮೈಗೆ ಅಂಟಿಕೊಂಡಿತ್ತು. ಬಳಿಕ ಸೀರೆಯನ್ನು ಕತ್ತರಿಸಿ ತೆಗೆಯಬೇಕಾಯಿತು. ಅದಾಗಲೇ ಕೈ, ಮುಖದ ಭಾಗ ಮತ್ತಿತರ ಕಡೆ ಬೆಂಕಿ ತಗಲಿತ್ತು ಎಂದು ನೆರವಿಗೆ ಧಾವಿಸಿದವರು ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಇಂಡೇನ್ ಗ್ಯಾಸ್ ಏಜೆನ್ಸಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಗ್ಯಾಸ್ ಪೈಪ್, ರೆಗ್ಯುಲೇಟರ್, ಸಿಲಿಂಡರ್ ತಪಾಸಣೆ ನಡೆಸಿದ್ದು, ರೆಗ್ಯುಲೇಟರ್ ಸಮೀಪ ಪೈಪ್‌ನಿಂದ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ.