ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರದ ಕೊರತೆ ಎದುರಿಸುತ್ತಿರುವ 44 ಉಪನ್ಯಾಸಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್ ಮಾಧ್ಯಮ ಪ್ರಕಟಣೆ ಮೂಲಕ ಈ ವಿಷಯ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ವರ್ಗಾವಣೆಯಾಗಲಿರುವ ಉಪನ್ಯಾಸಕರ ಹೆಸರುಗಳನ್ನು ಪ್ರಕಟಿಸಲಾಗಿದೆ. ಇಲಾಖೆಯ ಇಎಂಐಎಸ್ ತಂತ್ರಾಂಶದಲ್ಲಿ ಲಭ್ಯವಿರುವ ಅಭ್ಯರ್ಥಿಗಳ ಸೇವಾ ವಿವರಗಳನ್ನು ಪರಿಗಣಿಸಿ, ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗುವುದು. ಈ ಮಾಹಿತಿಯಲ್ಲಿ ಬದಲಾವಣೆ / ಆಕ್ಷೇಪಣೆ ಇದ್ದಲ್ಲಿ ಏಪ್ರಿಲ್ 6ರ ಒಳಗೆ ಇಲಾಖೆಯ ಇ-ಮೇಲ್ [email protected] ಗೆ ಸಲ್ಲಿಸಬಹುದಾಗಿದೆ. ಇದನ್ನು ಆಧರಿಸಿ, ಏ.7ರಂದು ಹುದ್ದೆ ಸ್ಥಳಾಂತರ ಮತ್ತು ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ಕಾಲೇಜುಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಏಪ್ರಿಲ್ 8ರಂದು ಕೌನ್ಸೆಲಿಂಗ್ ನಡೆಯಲಿದೆ.
ನಿಯಮಗಳ ಪ್ರಕಾರ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ ಮತ್ತು ಭಾಷಾ ವಿಷಯಗಳ ಬೋಧಕರಿಗೆ ವಾರಕ್ಕೆ 16 ಗಂಟೆ ಮತ್ತು ಪ್ರಾಯೋಗಿಕ ತರಗತಿಗಳಿರುವ ವಿಷಯಗಳ ಬೋಧಕರಿಗೆ 20 ಗಂಟೆಗಳ ಕಾರ್ಯಭಾರ ಇರಬೇಕಿದೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿರುವ ವಲಯದೊಳಗೇ ವರ್ಗಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.


