ತಮಿಳುನಾಡು:”ತನ್ನ ಪ್ರಿಯಕರನಿಗೆ ದುಬಾರಿ ಬೈಕ್ ಕೊಡಿಸುವ ಹುಚ್ಚಾಟದಲ್ಲಿ ೧೯ ವರ್ಷದ ಕಾಲೇಜು ಹುಡುಗಿಯೊಬ್ಬಳು ಜೈಲು ಪಾಲಾದ ಘಟನೆ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆದಿದೆ.
ಬಂಧಿತ ಯುವತಿಯನ್ನು ಪೊಳ್ಳಾಚಿಯ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿರುವ ಜಾಯ್ ಪ್ರಿನ್ಸಿ ಎಂದು ಗುರುತಿಸಲಾಗಿದೆ. ಆಗಸ್ಟ್ 16 ರಂದು ಈಕೆ ತನ್ನ ತಂದೆಯ ಆಪ್ತ ಸ್ನೇಹಿತ ತಮಿಳುಸೆಲ್ವನ್ ಅವರ ಮನೆಗೆ ಹೋಗಿದ್ದಳು. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಈ ಯುವತಿ, ಬೀರುನಲ್ಲಿದ್ದ ಬರೋಬ್ಬರಿ 9 ಪವನ್ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಳು.

ಬಳಿಕ ಆ ಕದ್ದ ಚಿನ್ನವನ್ನು ಪೊಳ್ಳಾಚಿಯ ಅಂಗಡಿಯೊಂದರಲ್ಲಿ ಮಾರಾಟ ಮಾಡಿ, ಸಿಕ್ಕ ೨.೫೦ ಲಕ್ಷ ರೂಪಾಯಿ ಹಣದಲ್ಲಿ ತನ್ನ ಪ್ರಿಯಕರ ಜನಗನ್ ಶಿವನಿಗೆ ಹೊಚ್ಚ ಹೊಸ ‘KTM ಬೈಕ್’ ಖರೀದಿಸಿ ಗಿಫ್ಟ್ ಕೊಟ್ಟಿದ್ದಳು. ಅಷ್ಟೇ ಅಲ್ಲ, ಹೊಸ ಬೈಕ್ ಜೊತೆ ಇಬ್ಬರೂ ಸೇರಿ ‘ರೀಲ್ಸ್’ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದರು.
ಇತ್ತ ಮನೆಯಲ್ಲಿ ಚಿನ್ನ ಕಾಣೆಯಾಗಿದ್ದಕ್ಕೆ ತಮಿಳುಸೆಲ್ವನ್ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗೆ ಇಳಿದ ಪೊಲೀಸರು ಅನುಮಾನದ ಮೇರೆಗೆ ಜಾಯ್ ಪ್ರಿನ್ಸಿಯನ್ನು ವಿಚಾರಣೆ ನಡೆಸಿ, ಆಕೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿದ್ದ ಬೈಕ್ ರೀಲ್ಸ್ ನೋಡಿದಾಗ ಅಸಲಿ ಕಳವಿನ ಸತ್ಯ ಹೊರಬಿದ್ದಿದೆ. ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಕದ್ದ ಬೈಕ್‌ನೊಂದಿಗೆ ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.”


