ಕೊಯಮತ್ತೂರು:ಮಧ್ಯರಾತ್ರಿ ರಸ್ತೆ ಬದಿ ಕುಳಿತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ 16 ವರ್ಷದ ಬಾಲಕನನ್ನು, ಆಕೆಯ ಮನೆಯ ಸಾಕಿದ ನಾಯಿಗಳು ಬೊಗಳಿ ಅಟ್ಟಾಡಿಸಿ ರಕ್ಷಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನ ತುದಿಯಲೂರು ಬಳಿ ನಡೆದಿದೆ.
ತುದಿಯಲೂರು ಸಮೀಪದ ಎನ್‌ಜಿಜಿಒ ಕಾಲೋನಿಯ ಸರ್ವಿಸ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ಸುಮಾರು 2 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ೩೦ ವರ್ಷದ ಮಹಿಳೆ ರಸ್ತೆ ಬದಿ ಕುಳಿತಿದ್ದಾಗ, ಅದೇ ಪ್ರದೇಶದ ೧೬ ವರ್ಷದ ಬಾಲಕ ಆಕೆಯ ಬಳಿ ಬಂದು ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು, ಹತ್ತಿರದಲ್ಲೇ ಇದ್ದ ಆಕೆಯ ಕುಟುಂಬದ ಎರಡು ಸಾಕಿದ ನಾಯಿಗಳು ತಕ್ಷಣವೇ ಆತನ ಮೇಲೆಯೇ ಎರಗಿಬಿದ್ದು ಜೋರಾಗಿ ಬೊಗಳಲು ಪ್ರಾರಂಭಿಸಿವೆ. ನಾಯಿಗಳ ರೌದ್ರಾವತಾರಕ್ಕೆ ಹೆದರಿದ ಬಾಲಕ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.
ಘಟನೆಯ ಇಡೀ ದೃಶ್ಯಾವಳಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ನೀಡಿದ ಮಾಹಿತಿಯಂತೆ ಆಕೆಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ತುದಿಯಲೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬಾಲಕನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.


