ಬೆಂಗಳೂರು : ಮೇ.6 ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿದ್ದು, ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಬಳಿಕ ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳಿಸಲಾಗಿದೆ ಎಂದು ತಿಳಿಸಿದ ಯಡಿಯೂರಪ್ಪನವರು, ಲಾಕ್ ಡೌನ್ ಸಡಿಲಿಕೆಯಾಗಿದೆ ಅಂದ ಮಾತ್ರಕ್ಕೆ ಸಾರ್ವಜನಿಕರು ಇದನ್ನು ಮನಬಂದಂತೆ ಬಳಸಿಕೊಳ್ಳುವಂತಿಲ್ಲವೆಂದಿದ್ದಾರೆ.
ಕರೋನಾ ಸಂಕಷ್ಟದ ನಡುವೆಯೂ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಅನುವು ಮಾಡಿಕೊಟ್ಟಿದ್ದು, ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದ ಯಡಿಯೂರಪ್ಪನವರು, ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಶೀಘ್ರದಲ್ಲೇ ಪರಿಹಾರ ಘೋಷಿಸುವುದಾಗಿ ತಿಳಿಸಿದ್ದಾರೆ.
ಒಟ್ಟು 1610 ಕೋಟಿ ರೂಪಾಯಿ ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಲಾಗಿದ್ದು, ಆಗಸ ಹಾಗೂ ಕ್ಷೌರಿಕರಿಗೆ ಒಂದು ಬಾರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ ಯಡಿಯೂರಪ್ಪ, ಆಟೋ, ಟ್ಯಾಕ್ಸಿ ಚಾಲಕರಿಗೂ ಇಷ್ಟೇ ಮೊತ್ತದ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಎರಡು ತಿಂಗಳ ವಿದ್ಯುತ್ ಶುಲ್ಕ ಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದ ಯಡಿಯೂರಪ್ಪನವರು ಇದೇ ಸಂದರ್ಭದಲ್ಲಿ ವಿದ್ಯುತ್ ಬಿಲ್ ಮುಂಗಡವಾಗಿ ಪಾವತಿಸುವವರಿಗೆ ರಿಯಾಯಿತಿ ನೀಡಲಾಗುತ್ತದೆ ಎಂದಿದ್ದಾರೆ.
ಬೃಹತ್ ಕೈಗಾರಿಕೆಗಳಿಗೆ ಎರಡು ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೂ ಯಾವುದೇ ದಂಡ ವಿಧಿಸಲಾಗುವುದಿಲ್ಲವೆಂದು ಯಡಿಯೂರಪ್ಪನವರು ತಿಳಿಸಿದ್ದು, ನೇಕಾರರ ಸಾಲ ಮನ್ನಾಕ್ಕಾಗಿ 80 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ನೇಕಾರ ಸಮ್ಮಾನ್ ಯೋಜನೆಯಡಿ ಎರಡು ಸಾವಿರ ರೂಪಾಯಿಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಸುದ್ದಿಗೋಷ್ಟಿ : ಬೃಹತ್ ಮೊತ್ತದ ಪ್ಯಾಕೇಜ್ ಘೋಷಣೆ
- Advertisement -
- Advertisement -
- Advertisement -