ಮಂಗಳೂರು:ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಕುರಿತಂತೆ ಸಭೆಗಳು ನಡೆದಿವೆ ಎಂದು ಹೇಳುವ ಮೂಲಕ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಸಾಧ್ಯತೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಸುಳಿವು ನೀಡಿದ್ದಾರೆ.
ಎರಡು ದಿನಗಳ ಕರಾವಳಿ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಸಿಎಂ, ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಈಗಾಗಲೇ ಒಬ್ಬ ದಕ್ಷರನ್ನು ಗೃಹ ಸಚಿವರನ್ನಾಗಿ ಮಾಡಲಾಗಿದೆ. ಅವರು ಈಗಾಗಲೇ ಎರಡು ಸಭೆ ಮಾಡಿದ್ದು, ಮುಂದೆಯೂ ಕೆಲ ಸಭೆ ನಡೆಯಲಿದೆ. ಮುಂಬರುವ ದಿನಗಳಲ್ಲಿ ಗೃಹ ಸಚಿವರು ಕರಾವಳಿಗೆ ಭೇಟಿ ಕೊಟ್ಟು ಪರಿಶೀಲಿಸಲಿದ್ದಾರೆ.ಆ ಬಳಿಕ ನಾವೆಲ್ಲರೂ ಒಟ್ಟಾಗಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕೆಲವು ವಿಚಾರಗಳನ್ನು ನಾವು ಬಹಿರಂಗ ಪಡಿಸಲುಆಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಹೇಳುವ ಮೂಲಕ ಎನ್ಐಎ ಕಚೇರಿ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.


