ಉಜಿರೆ: ಇಕೋ ಕಾರೊಂದು ನಿನ್ನೆ ರಾತ್ರಿ 11 ಗಂಟೆಗೆ ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಪಜ್ಜೆಮಾರು ಕುಟುಂಬದ ಮಗು ಮಾಧವಿ ಎಂಬವರು ಘಟನೆಯಿಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ.
ಉಳಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಕೋ ವಾಹನದಲ್ಲಿ ಸಂಬಂಧಿಕಾರಾದ ಚಾಲಕ ಪ್ರಮೋದ್, ಅವರ ಪತ್ನಿ ಅಶ್ವಿನಿ, ಮಮತ, ಅವರ ಮಗು ಸಾತ್ವಿ ಅವರಿಗೆ ಗಾಯಗಳಾಗಿವೆ.
ಈ ಬಗ್ಗೆ ಬಂಟ್ವಾಳ ತಾಲೂಕಿನ ಜಗನ್ನಾಥ ಶೆಟ್ಟಿ ಅವರ ಪುತ್ರಿ ದೀಕ್ಷಾ ಅವರು ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯಾಳುಗಳ ಪೈಕಿ ದೀಕ್ಷಾ, ಮಮತಾ, ಸಾತ್ವಿ ಅವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹಾಗೂ ಪ್ರಮೋದ್, ಅಶ್ವಿನಿ, ಮಾಧವಿ ಅವರನ್ನು ತಕ್ಷಣ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ಪೈಕಿ ಮಗು ಮಾಧವಿ ದಾರಿಮಧ್ಯೆ ಅಸುನೀಗಿದ್ದಾರೆ.
ವಾಹನ ಚಾಲಕ ಪ್ರಮೋದ್ ಅವರ ದುಡುಕುತನದ ವಾಹನ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ದಾಖಲಾಗಿದೆ. ಅಪಘಾತದ ಕಾರಣಕ್ಕೆ ಇಕೋ ಕಾರಿನ ಮುಂಭಾಗ ನುಜ್ಜುಗುಜ್ಜಾದರೆ ಟಿಪ್ಪರ್‌ನ ಹಿಂಭಾಗಕ್ಕೆ ಹಾನಿಯಾಗಿದೆ.