ಬೆಂಗಳೂರು: ವ್ಯಾಪಾರಿಗಳಿಂದ ಹಣ ಸಂಗ್ರಹಿಸಿ ಕಾರಿನಲ್ಲಿ ತೆರಳುತ್ತಿದ್ದ ಸಿಗರೇಟ್ ವಿತರಕನನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಡಿಕ್ಕಿ ಹೊಡೆದಂತೆ ಮಾಡಿ ಚಾಕು ತೋರಿಸಿ ಹಾಡಹಗಲೇ 45.50 ಲಕ್ಷ ರೂ. ಹಣ ಎಗರಿಸಿ ದರೋಡೆ ಮಾಡಿದ ಸಿನಿಮಯ ಘಟನೆ ಬೆಂಗಳೂರಿನ ಫ್ರೇಜರ್ ಟೌನ್‍ನಲ್ಲಿ ನಡೆದಿದೆ.
ಐಟಿಸಿ ಸಿಗರೇಟ್ ಕಂಪೆನಿ ಡಿಸ್ಟ್ರಿಬ್ಯೂಟರ್ ರಾಕೇಶ್ ಪೊಕರಾನ ಹಣ ಕಳೆದುಕೊಂಡವರು.
ರಾಜಸ್ಥಾನ ಮೂಲದ ರಾಕೇಶ್ ಬಳಿ 100ಕ್ಕೂ ಹೆಚ್ಚು ಮಂದಿ ಕೆಲಸಗಾರರಿದ್ದಾರೆ. ಕಂಪನಿಯಿಂದ ಮಾಲ್, ಚಿಲ್ಲರೆ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡಲಾಗುತ್ತದೆ. ಜೂ.11ರ ಸಂಜೆ 6 ಗಂಟೆಯಲ್ಲಿ ಸೇಲ್ಸ್ಮ್ಯಾನ್ಗಳು ವ್ಯಾಪಾರಿಗಳಿಂದ ಸಂಗ್ರಹಿಸಿ ಕೊಟ್ಟಿದ್ದ ಹಣವನ್ನು ಬಿಸ್ಕೆಟ್ ಡಬ್ಬಿಯಲ್ಲಿಟ್ಟುಕೊಂಡು ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಹಣವಿದ್ದ ಡಬ್ಬಿಯನ್ನು ಚಾಲಕನ ಪಕ್ಕದಲ್ಲಿರುವ ಸೀಟಿನಲ್ಲಿಟ್ಟು, ರಾಕೇಶ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಬೈಕ್‍ನಲ್ಲಿ ಕಾರನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಮೊದಲಿಗೆ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ನಾಲ್ವರು ಕಾರನ್ನು ಅಡ್ಡಗಟ್ಟಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ರಾಕೇಶ್ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.


