
ಮುಂಬೈ: ಬಾಲಿವುಡ್ ಹಿರಿಯ ನಟ, ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ಅನಾರೋಗ್ಯದಿಂದಾಗಿ ಅವರು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮಿತಾಭ್ ಗೆ 81 ವರ್ಷದ ವಯಸ್ಸಾಗಿದ್ದು, ಕಾಲಿನ ರಕ್ತನಾಳಗಳಲ್ಲಿ ಸಮಸ್ಯೆ ಇರುವುದರಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಗುರುವಾರ ಅಂಜಿಯೋಪ್ಲಾಸ್ಟಿ ಮಾಡಲಾಗಿದ್ದು ಇದೀಗ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದು, ‘ಎಂದೆಂದಿಗೂ ಚಿರಋಣಿ’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಹೇಳುತ್ತಿದ್ದಾರೆ.

ಆದರೆ ಅಮಿತಾಭ್ ಅವರ ಆರೋಗ್ಯದ ಕುರಿತು ಆಸ್ಪತ್ರೆ ಅಥವಾ ಕುಟುಂಬದವರು ಯಾವುದೇ ಮಾಹಿತಿ ನೀಡದಿರುವ ಕಾರಣ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳು ಅವರ ಹೆಲ್ತ್ ಅಪ್‌ಡೇಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ಬೇಡಿಕೆ ಇರಿಸಿಕೊಂಡಿರುವ ಅಮಿತಾಬ್ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರು ಪ್ರಭಾಸ್ ನಟನೆಯ ‘ಕಲ್ಕಿ’ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ನಾಯಕ ನಟರಾಗಿರುವ `ವೆಟ್ರೈಯಾನ್’ ಸಿನಿಮಾದಲ್ಲೂ ಅಮಿತಾಭ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.


