Friday, July 31, 2026
Homeಕರಾವಳಿಉಡುಪಿಉಡುಪಿ ಮಹಾಲಕ್ಷ್ಮಿ ಬ್ಯಾಂಕ್‌ನಲ್ಲಿ ₹178 ಕೋಟಿ ಅವ್ಯವಹಾರ: ಶಾಸಕ ಯಶಪಾಲ್ ಸುವರ್ಣ ವಿರುದ್ಧ ಎಸ್‌ಐಟಿ ತನಿಖೆಗೆ...

ಉಡುಪಿ ಮಹಾಲಕ್ಷ್ಮಿ ಬ್ಯಾಂಕ್‌ನಲ್ಲಿ ₹178 ಕೋಟಿ ಅವ್ಯವಹಾರ: ಶಾಸಕ ಯಶಪಾಲ್ ಸುವರ್ಣ ವಿರುದ್ಧ ಎಸ್‌ಐಟಿ ತನಿಖೆಗೆ ಬಿ.ಕೆ. ಹರಿಪ್ರಸಾದ್ ಆಗ್ರಹ

- Advertisement -
- Advertisement -

ನವದೆಹಲಿ: ಉಡುಪಿಯ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಭಾರಿ ಪ್ರಮಾಣದ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಯಶಪಾಲ್ ಸುವರ್ಣ ವಿರುದ್ಧ ಗಂಭೀರ ಅಕ್ರಮದ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಬೇಕೆಂದು ಅವರು ದೆಹಲಿಯಲ್ಲಿ ಆಗ್ರಹಿಸಿದ್ದಾರೆ.

ನಕಲಿ ಸಹಿ ಹಾಗೂ ಬಡ ಮಹಿಳೆಯರಿಗೆ ವಂಚನೆ: ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬ್ಯಾಂಕ್ ಅಧ್ಯಕ್ಷರಾಗಿರುವ ಶಾಸಕ ಯಶಪಾಲ್ ಸುವರ್ಣ ನಕಲಿ ಸಹಿಗಳನ್ನು ಬಳಸಿ ಅಕ್ರಮ ಎಸಗಿದ್ದಾರೆ. ಸುಮಾರು ಮೂರು ಸಾವಿರ ಮಹಿಳೆಯರ ಮನೆಗೆ ತೆರಳಿ ತಲಾ 20,000 ರೂಪಾಯಿ ಸಾಲ ಕೊಡುವುದಾಗಿ ನಂಬಿಸಿ, ಅವರ ಹೆಸರಿನಲ್ಲಿ ತಲಾ 2 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಲಾಗಿದೆ. ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಸುಮಾರು 13 ಜನರಿಗೆ ಒಂದು ರೂಪಾಯಿಯನ್ನೂ ನೀಡದೆ ಅವರ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಎತ್ತಲಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಸದಾ ಪ್ರಚೋದನಾಕಾರಿ ಭಾಷಣ ಮಾಡುವವರು, ಅವರ ನಕಲಿ ಸಹಿ ಪಡೆದೂ ವಂಚಿಸಿದ್ದಾರೆ” ಎಂದು ಹರಿಪ್ರಸಾದ್ ಆಕ್ರೋಶ ಹೊರಹಾಕಿದರು.

₹178 ಕೋಟಿ ಅಕ್ರಮ & ನೌಕರನ ಶಂಕಿತ ಸಾವು: ಬ್ಯಾಂಕ್ ಆಡಿಟ್ ನಡೆಸಿದಾಗ ಬರೋಬ್ಬರಿ 178 ಕೋಟಿ ರೂಪಾಯಿ ಅವ್ಯವಹಾರ ಬೆಳಕಿಗೆ ಬಂದಿದೆ ಎಂದು ತಿಳಿಸಿದ ಅವರು, “ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ನೌಕರನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಅದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಬಲವಾದ ಶಂಕೆ ಇದೆ. ಈ ಬಗ್ಗೆ ತನಿಖೆ ಚುರುಕಾಗಬೇಕಿದೆ. ಠೇವಣಿದಾರರು ಬ್ಯಾಂಕ್ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ಸರ್ಕಾರ ಕೂಡಲೇ ಎಸ್‌ಐಟಿ (SIT) ತನಿಖೆಗೆ ಆದೇಶಿಸಬೇಕು” ಎಂದರು.

ಇತಿಹಾಸ ನೆನಪಿಸಿ ಆಕ್ರೋಶ: ಹಿಂದಿನ ಘಟನೆಯೊಂದನ್ನು ಉಲ್ಲೇಖಿಸಿದ ಅವರು, “ಅಜ್ಜಪ್ಪ ಮತ್ತು ಅಸ್ನಪ್ಪ ಎಂಬವರನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದ ಘಟನೆಯನ್ನು ಅಂದಿನ ಹಿರಿಯ ಬಿಜೆಪಿ ನಾಯಕ ವಿ.ಎಸ್. ಆಚಾರ್ಯ ಅವರೇ ಖಂಡಿಸಿದ್ದರು. ನಕಲಿ ದೇಶಭಕ್ತರಿಂದ, ನಕಲಿ ದೈವಭಕ್ತರಿಂದ ಹಾಗೂ ಹುಂಡಿ ಕಳ್ಳರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಗಾಂಧಿ ಕುಟುಂಬ ಯಾವುದಕ್ಕೂ ಹೆದರುವುದಿಲ್ಲ: ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧದ ಹೇಳಿಕೆಗಳಿಗೆ ತಿರುಗೇಟು ನೀಡಿದ ಅವರು, “ದಾರಿಯಲ್ಲಿ ಹೋಗುವವರೆಲ್ಲಾ ರಾಹುಲ್ ಗಾಂಧಿಯವರನ್ನು ಮುಗಿಸುತ್ತೇವೆ ಎನ್ನುತ್ತಾರೆ. ಗಾಂಧೀಜಿಯವರನ್ನು ಹತ್ಯೆ ಮಾಡಿದ್ದು ಗೋಡ್ಸೆ ಸಂತತಿ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರನ್ನೂ ಹತ್ಯೆ ಮಾಡಲಾಯಿತು. ಆದರೆ ಗಾಂಧಿ ಕುಟುಂಬ ಯಾರಿಗೂ ಹೆದರುವುದಿಲ್ಲ, ರಾಹುಲ್ ಗಾಂಧಿ ಅವರ ಹೋರಾಟ ನಿರಂತರವಾಗಿರಲಿದೆ” ಎಂದು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!