
ಬೆಳ್ತಂಗಡಿ: ತಾಲೂಕಿನಾದ್ಯಂತ ಆಗಸ್ಟ್ 1 ರಂದು ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ, ಮೃತ್ಯುಂಜಯ, ಫಲ್ಗುಣಿ ಹಾಗೂ ಸೋಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಾಲೂಕಿನಾದ್ಯಂತ ಪ್ರವಾಹದ ಭೀತಿ ಎದುರಾಗಿದೆ.
ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಲಾಯಿಲ-ಕಿಲ್ಲೂರು ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಇತ್ತ ಮುಂಡಾಜೆ-ಧರ್ಮಸ್ಥಳ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಧರ್ಮಸ್ಥಳದ ಮಣ್ಣಸಂಕ ಪ್ರದೇಶ ಮುಳುಗಡೆಯಾಗಿದ್ದು, ಭಾರಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ.
ಸೋಮಂತಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡೂ ಬದಿಯ ಮಳೆ ನೀರನ್ನು ಒಂದೇ ಚರಂಡಿಗೆ ಹರಿಸಿರುವುದೇ ಪ್ರವಾಹಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ಹಾಗೂ ಕೃಷಿ ಜಮೀನುಗಳಿಗೆ ನುಗ್ಗಿದೆ. ತಾಲೂಕಿನ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಬಹುತೇಕ ಕಿರು ಅಣೆಕಟ್ಟುಗಳು ನೀರಿನಲ್ಲಿ ಮುಳುಗಿವೆ. ಮುಂಡಾಜೆ, ಪುದುವೆಟ್ಟು, ಕಿಲ್ಲೂರು, ಶಿರ್ಲಾಲು, ಸುಲ್ಕೇರಿಮೊಗ್ರು, ಚಾರ್ಮಾಡಿ ಹಾಗೂ ನೆರಿಯ ಭಾಗಗಳಲ್ಲಿ ಕೃಷಿ ಭೂಮಿ ಮತ್ತು ಅಡಿಕೆ ತೋಟಗಳು ಸಂಪೂರ್ಣ ಜಲಾವೃತಗೊಂಡು ಭಾರಿ ನಷ್ಟ ಸಂಭವಿಸಿದೆ.


