ಬೆಳ್ತಂಗಡಿ : ಮೂರು ನಕ್ಸಲ್ ಚಟುವಟಿಕೆ ಪ್ರಕರಣ ದಾಖಲಾದ ಸಂಬಂಧ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ ಪೊಲೀಸರು ಕೇರಳ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಇಬ್ಬರು ನಕ್ಸಲರನ್ನು ಎರಡು ದಿನ ಕಸ್ಟಡಿಗೆ ಪಡೆದು ಮೂರು ಪ್ರಕರಣವನ್ನು ತನಿಖೆ ನಡೆಸಲಿದ್ದಾರೆ.
8-112021 ರಂದು ಕೇರಳ ರಾಜ್ಯದ ಪೊಲೀಸರು ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿಯನ್ನು ಬಂಧಿಸಿ ತ್ರಿಶೂರ್ ಜೈಲಿನಡಿಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ 53 ಪ್ರಕರಣ ,ಸಮಿತ್ರಿ ವಿರುದ್ಧ 22 ಪ್ರಕರಣ ತನಿಖೆಯಲ್ಲಿದೆ.
2012-2013 ರಲ್ಲಿ ನಡೆದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಮನೆಯ ಅಂಗಳದಲ್ಲಿದ್ದ ಕಾರು, ಬೈಕ್ ಗೆ ಬೆಂಕಿ ಹಚ್ಚಿದ ಪ್ರಕರಣ,ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ಯತಡ್ಕ ಗ್ರಾಮದಲ್ಲಿ ನಕ್ಸಲ್ ಬೆಂಬಲಿತ ಬ್ಯಾನರ್ ಹಾಕಿದ ಪ್ರಕರಣ,ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಪೋಟಕ ಪತ್ತೆ ಪ್ರಕರಣದಲ್ಲಿ ಇಬ್ಬರನ್ನು ಬಾಡಿ ವಾರೆಂಟ್ ಮೂಲಕ ಕೇರಳ ರಾಜ್ಯದ ತ್ರಿಶೂರ್ ಜೈಲಿನಿಂದ ಎ.7 ರಂದು ಭದ್ರತೆಯಲ್ಲಿ ಕರೆದುಕೊಂಡು ಬಂದಿದ್ದಾರೆ.

ಕೇರಳ ರಾಜ್ಯದಿಂದ ಅಲ್ಲಿನ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಬಳಿಕ ತನಿಖಾಧಿಕಾರಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ತಂಡಕ್ಕೆ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಇಬ್ಬರು ನಕ್ಸಲರನ್ನು ಒಪ್ಪಿಸಿದೆ. ಬೆಳ್ತಂಗಡಿ, ವೇಣೂರು, ಧರ್ಮಸ್ಥಳ , ಪುಂಜಾಲಕಟ್ಟೆ ಪೊಲೀಸರು ಭದ್ರತೆ ನೀಡಿದ್ದಾರೆ.