ಬೆಳ್ತಂಗಡಿ : ಅಕ್ರಮವಾಗಿ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಕಟ್ಟಡಗಳ ಕಾಮಗಾರಿಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಿರ್ಮಾಣ ಮಾಡುವ ದಂಧೆಗಳು ಹೆಚ್ಚಾಗುತ್ತಿದೆ. ಕಾನೂನಿನ ಬಗ್ಗೆ ಯಾವುದೇ ಭಯ ಇಲ್ಲದೆ ರಾಜರೋಷವಾಗಿ ಕಾರ್ಯಾಚರಿಸುತ್ತಿದೆ. ಈ ನಡುವೆ ದೂರಿನ ಮೇರೆಗೆ ಹಲವು ಕಟ್ಟಡಗಳ ಕಾಮಗಾರಿ ಕೆಲಸಗಳನ್ನು ನಿಲ್ಲಿಸಿದ್ದರೂ, ಕೆಲ ಅಧಿಕಾರಿಗಳಿಗೆ ಮಾಮೂಲಿ ನೀಡಿ ರಾತ್ರಿ ಸಮಯದಲ್ಲಿ ಕಾಮಗಾರಿ ಮುಂದುವರಿಸುವ ಕಾರ್ಯದಲ್ಲಿ ಕೆಲವರು ಮಾಡುತ್ತಿದ್ದಾರೆ. ಈ ನಡುವೆ ಮತ್ತೊಂದು ಅನಧಿಕೃತ ವಾಣಿಜ್ಯ ಕಟ್ಟಡ ಕಾಮಗಾರಿಗೆ ಬೆಳ್ತಂಗಡಿ ನಗರ ಪಂಚಾಯತ್ ನೋಟಿಸ್ ಜಾರಿ ಮಾಡಿ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ.
ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಗೆ ಬರುವ ಬಂಟರ ಭವನದ ಬಳಿ ಫಿಲಿಪ್ ವೇಗಸ್ ಎಂಬವರು ಅನುಮತಿ ಪಡೆಯದೆ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ಕಾಮಗಾರಿ ನಡೆಸುತ್ತಿರುವ ಬಗ್ಗೆ ಜ.22 ರಂದು ಬಂದ ದೂರಿನ ಮೇರೆಗೆ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೋಟ್ಯಾನ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಯಾವುದೇ ನಗರ ಪಂಚಾಯತ್ ಅನುಮತಿ ಇಲ್ಲದೆ ಅನಧಿಕೃತವಾಗಿ ಕಟ್ಟಡ ಕಾಮಗಾರಿ ಮಾಡುತ್ತಿರುವುದು ಸಾಬೀತಾಗಿದೆ.
ಈ ಅಕ್ರಮ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ತಪ್ಪಿದ್ದಲ್ಲಿ ಪುರಸಭಾ ಅಧಿನಿಯಮದಂತೆ ಕ್ರಮ ವಹಿಸಲಾಗುವುದು ಎಂದು ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಕಟ್ಟಡ ಮಾಲೀಕರಾದ ಫಿಲಿಪ್ ವೇಗಸ್ ಅವರಿಗೆ ಜ.23 ರಂದು ನೋಟಿಸ್ ಜಾರಿ ಮಾಡಿದ್ದಾರೆ.


