ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿಯವರೆಗೆ ಭೌತಿಕವಾಗಿ ಕೋವಿಡ್ ಮಾರ್ಗಸೂಚಿಯಂತೆ ತರಗತಿ ನಡೆಸಲು ನಿರ್ಧರಿಸಿದೆ.
ಕೋವಿಡ್ ಕಾರಣದಿಂದ ಸುಮಾರು 20 ತಿಂಗಳು ಮುಚ್ಚಲಾಗಿದ್ದ 1ರಿಂದ 5ನೇ ತರಗತಿ ಶಾಲೆಗಳು ತೆರೆಯಲಿದ್ದು ನಾಳೆಯಿಂದ ರಾಜ್ಯಾದ್ಯಂತ ತರಗತಿ ಆರಂಭವಾಗುತ್ತಿವೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಭೌತಿಕ ತರಗತಿ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೀಗಾಗಿ ಮಕ್ಕಳು ಕೂಡಾ ಶಾಲೆಗೆ ಹೋಗಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಕೋವಿಡ್ ನಿಯಮದಂತೆ ತರಗತಿಗಳು ಆರಂಭವಾಗಲಿದ್ದು ಪ್ರಾಥಮಿಕ ಶಾಲೆ ಆರಂಭಕ್ಕೆ ಸರ್ಕಾರ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ನಡೆಸಲು ಶಾಲೆಗಳಿಗೆ ಅವಕಾಶ ನೀಡಲಾಗಿದ್ದು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ತೆರೆಯಬೇಕಾಗಿದೆ . ಇನ್ನುಳಿದ ಎರಡು ದಿನ ಶಾಲೆ ಕೊಠಡಿಗಳ ಸ್ವಚ್ಛತಾ ಕಾರ್ಯ, ಸ್ಯಾನಿಟೈಸರ್ಗೆ ಅವಕಾಶ ನೀಡಲಾಗಿದೆ.
ಇನ್ನು ಮಕ್ಕಳಿಗೆ ಒಂದು ದಿನ ತರಗತಿ ಒಂದು ದಿನ ರಜೆ ನೀಡಲಾಗಿದೆ. ಮಕ್ಕಳು ಶಾಲೆಗಳಿಗೆ ಬರಲು ಪೋಷಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆದುಕೊಂಡು ಬರಬೇಕು. ಮಧ್ಯಾಹ್ನದ ಅವಧಿಗೆ ತರಗತಿಗಳನ್ನು ಸೀಮಿತಗೊಳಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಸೂಚಿಸಲಾಗಿದೆ. ಇನ್ನು ಅನುಮತಿ ಪತ್ರದಲ್ಲಿ ವಿದ್ಯಾರ್ಥಿಯ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢೀಕರಿಸಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
ಅಲ್ಲದೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ತರಗತಿಗೂ ಅವಕಾಶ ನೀಡಲಾಗಿದೆ. 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು. ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಲಾಗಿದೆ. 25 ರಿಂದ ನವೆಂಬರ್ 2ರವರೆಗೂ ಅರ್ಧ ದಿನ ಮಾತ್ರ ತರಗತಿ, ನವೆಂಬರ್ 2 ರಿಂದ ಪೂರ್ತಿ ದಿನ ತರಗತಿ ನಡೆಸಲು ಸೂಚನೆ ನೀಡಲಾಗಿದೆ