ಬಂಟ್ವಾಳ: ಕಳೆದ ಭಾನುವಾರ ಬಂಟ್ವಾಳ ನಗರದ ಕೆಳಗಿನ ಪೇಟೆಯ 45 ವರ್ಷದ ಮಹಿಳೆ ಕೊರೋನಾಗೆ ತುತ್ತಾಗಿ ಜೀವ ತೆತ್ತಿರುವ ಬೆನ್ನಲ್ಲೇ ಅವರ ಅತ್ತೆ (75 ವರ್ಷ) ಕೂಡ ಇಂದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ಸೊಸೆ ಮೃತಪಟ್ಟ ಸಮಯದಲ್ಲಿ ಅತ್ತೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಜಿಲ್ಲೆಯ ವೆನ್ಲಾಕ್ ಕೋವಿದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಮೃತಪಟ್ಟ ಅತ್ತೆ ಬಹಳ ಕಾಲದಿಂದ ಪಾರ್ಶ್ವವಾಯುವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಒಂದೇ 18 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆಯಾಗಿದೆ.
ಇಂದು ಬೆಳಗ್ಗೆ 16 ಮಂದಿಗೆ ಹಾಗೂ ಸಂಜೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 17 ಜನರು ಮೃತಪಟ್ಟಿದ್ದು, 145 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಸೋಂಕಿತ 419ರ ಸಂಪರ್ಕದಿಂದ ಬರೋಬ್ಬರಿ 9 ಜನರಿಗೆ ಸೋಂಕು ಹರಡಿದೆ. ಇವರೆಲ್ಲರೂ ಬೆಂಗಳೂರಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಂಗಳೂರು ನಗರದಲ್ಲಿ 10, ವಿಜಯಪುರದಲ್ಲಿ 2, ಹುಬ್ಬಳ್ಳಿಯಲ್ಲಿ 2, ಮಂಡ್ಯದಲ್ಲಿ 2 ಹಾಗೂ ಕಲಬುರ್ಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗುವೆ.