ಬೆಳ್ತಂಗಡಿ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಹಾಗೂ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ರಾಜ್ಯಮಟ್ಟದ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ “ಜ್ಞಾನ ದರ್ಶಿನಿ’ ಮತ್ತು “ಜ್ಞಾನ ವರ್ಷಿಣಿ 2024’ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಆ.10ರಂದು ಬೆಳಗ್ಗೆ 10.30ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿದ್ದು, ಶಾಂತಿವನ ಟ್ರಸ್ಟ್ನ ಟ್ರಸ್ಟಿಗಳಾದ ಹೇಮಾವತಿ ವೀ.ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿರುವರು.
ಕೃತಿಯನ್ನು ಹಾವೇರಿ ಶ್ರೀ ಹುಕ್ಕೇರಿಮಠದ ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಸದಾಶಿವ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸುವರು. ಪುರಸ್ಕಾರವನ್ನು ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ, ಅರ್ಜುನ್ ಜನ್ಯ ಪ್ರದಾನಿಸುವರು. ಅಭ್ಯಾಗತರಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ. ಜಿಲ್ಲೆಯ ಉಪ ನಿರ್ದೇಶಕ (ಆಡಳಿತ) ವೆಂಕಟೇಶ ಸುಬ್ರಾಯ ಪಟಗಾರ ಭಾಗವಹಿಸಲಿದ್ದಾರೆ.
ದಾವಣಗೆರೆಯ ರಾಷ್ಟ್ರೀಯ ಕಲಾವಿದ ಶಾಂತಯ್ಯ ಪರಡಿಮಠ ಇವರಿಂದ ಕುಂಚ ಹಾಗು ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಗಾಯನ ಮತ್ತು ನೃತ್ಯ ನಡೆಯಲಿದೆ ಎಂದು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.