ಬಂಟ್ವಾಳ; ಬಾಡಿಗೆಗೆಂದು ಹೋದ ಆಟೋ ಚಾಲಕ ನಿಗೂಢ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರ್ ಬಾಬು ಪೂಜಾರಿ ಅವರ ಪುತ್ರ ಗಿರೀಶ್ (37) ನಾಪತ್ತೆಯಾದ ಚಾಲಕ.ಗಿರೀಶ್ ರಿಕ್ಷಾ ಗುರುವಾರ ಅಡ್ಡೂರು-ಪೊಳಲಿ ಸೇತುವೆಯಲ್ಲಿ ಚಾಲನೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗಿರೀಶ್ ನಾಪತ್ತೆಯಗಿರುವ ಬಗ್ಗೆ ಪತ್ನಿ ತಾರಾ ಗುರುವಾರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಿರೀಶ್ ಎಣ್ಮೂರು ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿದ್ದರು. ಇಬ್ಬರು ಮಕ್ಕಳಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ಹೇಳಿ ತಡರಾತ್ರಿ ಎರಡು ಗಂಟೆಯ ಹೊತ್ತಿಗೆ ಗಿರೀಶ್ ರಿಕ್ಷಾದಲ್ಲಿ ಹೊರಟವರು ಬಳಿಕ ನಾಪತ್ತೆಯಾಗಿದ್ದಾರೆ. ಅಡ್ಡೂರು-ಪೊಳಲಿ ಸೇತುವೆಯಲ್ಲಿ ಎಂಜಿನ್ ಚಾಲನೆಯಲ್ಲೇ ನಿಂತಿದ್ದ ರಿಕ್ಷಾವನ್ನು ಗಸ್ತಿನಲ್ಲಿದ್ದ ಬಜಪೆ ಪೋಲಿಸರು ಪರಿಶೀಲಿಸಿದ್ದಾರೆ. ಚಾಲಕನಿಗಾಗಿ ಅಲ್ಲಿ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಬಳಿಕ ರಿಕ್ಷಾದಲ್ಲಿ ದೊರೆತ ದಾಖಲೆ ಪತ್ರದ ಆಧಾರದಲ್ಲಿ ಅವರ ಮನೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೊಳಲಿಯ ಫಲ್ಗುಣಿ ನದಿ ಸಹಿತ ವಿವಿಧೆಡೆ ಶೋಧ ನಡೆಸಿದ್ದಾರೆ. ಸಂಜೆಯವರೆಗೂ ಗಿರೀಶ್ ಸುಳಿವು ಪತ್ತೆಯಾಗಿಲ್ಲ. ಗಿರೀಶ್ ಅವರಿಗಾಗಿ ಹುಡುಕಾಟ ಮುಂದುವರಿದಿದೆ.