ಚಿಕ್ಕಮಗಳೂರು: ಹೆಲ್ಮೇಟ್ ಧರಿಸದ ವಕೀಲನ ಮೇಲೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹೆಲ್ಮೇಟ್ ಧರಿಸದೆ ಬೈಕ್ ಓಡಿಸುತ್ತಿದ್ದ ಯುವ ವಕೀಲ ಪ್ರೀತಮ್ ಮೇಲೆ ಪೊಲೀಸರು ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ದಂಡ ಕಟ್ಟುವುದಾಗಿ ಹೇಳಿದರೂ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಅದು ಮಾತ್ರವಲ್ಲದೆ ಪೊಲೀಸ್ ಠಾಣೆಗೂ ಕರೆದೊಯ್ಯಲಾಗಿದ್ದು, ಬೈಕ್ ಕೀ ಕಿತ್ತುಕೊಂಡಿದ್ದಾರೆಂದು ವಕೀಲ ಆರೋಪಿಸಿದ್ದಾನೆ.
ಯುವ ವಕೀಲನಿಗೆ ಎದೆ, ಬೆನ್ನು, ಕೈಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ವಕೀಲರ ಸಮೂಹ ಆಸ್ಪತ್ರೆ ಮತ್ತು ನಗರ ಪೊಲೀಸ್ ಠಾಣೆ ಮುಂದೇ ಜಮಾಯಿಸಿ, ಪೊಲೀಸರ ನಡೆ ವಿರೋಧಿಸಿ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಬೇಟಿ ನೀಡಿದರು.
ವಕೀಲನ ಮೇಲೆ ಹಲ್ಲೆ ನಡೆಸಿರುವ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ವಕೀಲರು ತಡರಾತ್ರಿ ಎರಡು ಗಂಟೆಯವರೆಗೂ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರಗೊಳುತ್ತಿದ್ದಂತೆ ಶಶಿಕುಮಾರ್, ಗುರುಪ್ರಸಾದ್ ಎಂಬ ಪೊಲೀಸರ ಮೇಲೆ ಪ್ರಕರಣ ದಾಖಲಿಸಿ ಆರು ಜನ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದಾರೆ. ಆರು ಜನ ಪೊಲೀಸರನ್ನು ಬಂಧಿಸಬೇಕೆಂದು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ.