ಮಂಗಳೂರು : ಬಿಲ್ಡರ್ ಹಾಗೂ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಆ.9 ರಂದು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದ ಮೂಲಕ ಬಂದಿದ್ದು, ಅಲ್ಲಿಂದ ತನ್ನ ಆಡಿ ಕಾರಿನಲ್ಲಿ ಅತಿ ವೇಗದಿಂದ ಮಂಗಳೂರು ಕಡೆಗೆ ಬಂದಿದ್ದರು. ಈ ವೇಳೆ, ಮರಕಡ ತಲುಪುತ್ತಿದ್ದಾಗ ಯುವಕರಿದ್ದ ಕಾರನ್ನು ಅತಿ ವೇಗದಿಂದ ಓವರ್ ಟೇಕ್ ಮಾಡಿದ್ದಾರೆ. ಓವರ್ ಟೇಕ್ ಮಾಡಿದ ರೀತಿಯಿಂದ ಸಿಟ್ಟಾಗಿದ್ದ ಯುವಕರು ಕಾರನ್ನು ಬೆನ್ನಟ್ಟಿ ಬಂದಿದ್ದರು. ಆನಂತರ, ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದ ಜಿತೇಂದ್ರ ಕೊಟ್ಟಾರಿ ಭಯಗೊಂಡು ಮಂಗಳೂರಿನ ಒಳ ದಾರಿಯಲ್ಲಿ ಸಾಗಿ ತಪ್ಪಿಸಲು ಯತ್ನಿಸಿದ್ದಾರೆ.
ಕೊನೆಗೆ ಕೊಡಿಯಾಲಬೈಲಿನ ಫ್ಲಾಟಿಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕರಿದ್ದ ಕಾರು ಕೂಡ ಬಂದಿದ್ದು, ನಡುರಾತ್ರಿಯಲ್ಲಿ ಮನೆಯ ಕಂಪೌಂಡ್ ಒಳಗಡೆ ಬಂದು ಯುವಕರು ದಾಂಧಲೆ ನಡೆಸಿದ್ದಾರೆ. ಈ ವೇಳೆ, ಪತ್ನಿಯ ಬಳಿ ಮನೆಯೊಳಗಿಂದ ತನ್ನ ಗನ್ ತರುವಂತೆ ಜಿತೇಂದ್ರ ಕೊಟ್ಟಾರಿ ತಿಳಿಸಿದ್ದು, ಗನ್ ತೋರಿಸುತ್ತಿದ್ದಂತೆ ಯುವಕರು ಕೊಟ್ಟಾರಿ ಕೈಯನ್ನು ತಿರುಚಿ ಹಲ್ಲೆ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಯುವಕರು, ಜಿತೇಂದ್ರ ಕೊಟ್ಟಾರಿಯನ್ನು ಜಾಡಿಸಿದ್ದು ಅವಾಚ್ಯವಾಗಿ ನಿಂದಿಸಿದ್ದಾರೆ. ಅಡ್ಡ ಬಂದ ಪತ್ನಿ ಮತ್ತು ಮಗಳಿಗೂ ಹಲ್ಲೆಗೆ ಯತ್ನಿಸಿದ್ದಾರೆ. ನಡುರಾತ್ರಿ 12 ಗಂಟೆ ವೇಳೆಗೆ ಘಟನೆ ನಡೆದಿದೆ. ಬರ್ಕೆ ಪೊಲೀಸರು ಸ್ಥಳಕ್ಕೆ ಬಂದು ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಜಿತೇಂದ್ರ ಕೊಟ್ಟಾರಿ ತಲೆಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು. ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ Cr no. 92/2024 ಕಲಂ 126(2),118(1),74, 352, 351(2) 351(3), 3(5 ) BNS ACT ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.